ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಫೆಬ್ರವರಿಯಲ್ಲಿ ಮಹಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಹಿಂಸಾಚಾರ ಮರುಕಳಿಸಿದ್ದು, ಮಂಗಳವಾರವೂ ಮುಂದುವರಿದಿದೆ. ಚಟ್ಟೋಗ್ರಾಂನಲ್ಲಿ ಉದ್ರಿಕ್ತ ಗುಂಪು ಹಿಂದೂಗಳ ಮನೆಗೆ ಬೆಂಕಿ ಹಚ್ಚಿದ್ದು, ಕುಟುಂಬದ ಸದಸ್ಯರು ಕಾಂಪೌಂಡ್ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಒಳಗಿದ್ದ ಪ್ರಾಣಿಗಳು ಜೀವಂತವಾಗಿ ದಹನವಾಗಿದ್ದರೆ, ವಸ್ತುಗಳು ಸುಟ್ಟು ಹೋಗಿವೆ. ಈ ಘಟನೆಯಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ.
ನೀವು ಚಳವಳಿ ಮಾಡುವ ಮೂಲಕ ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಚಟುವಟಿಕೆಯ ಆರೋಪಿಗಳಾಗಿದ್ದೀರಿ. ನಿಮ್ಮ ಸಭೆ ಮತ್ತು ಚಟುವಟಿಕೆಗಳನ್ನು ನಿಲ್ಲಿಸದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬ್ಯಾನರ್ ಹಾಕಿ ಬೆದರಿಸಲಾಗಿದೆ.
ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರೋಥೊಮ್ ಅಲೋ ಹಾಗೂ ದಿ ಡೈಲಿ ಸ್ಟಾರ್‌ನಂತಹ ಪತ್ರಿಕೆಗಳ ಸಂಪಾ ದಕರ ಸಹಿತ 20 ಪ್ರಮುಖ ಗಣ್ಯರ ಭದ್ರತೆ ಹೆಚ್ಚಿಸಲಾಗಿದೆ. ಪ್ರಮುಖ ಪತ್ರಿಕೆಗಳ ಸಂಪಾದಕರು ಪತ್ರಿಕಾಗೋಷ್ಠಿ ನಡೆಸಿ, ಪತ್ರಕರ್ತರ ಬದುಕಿನ ಹಕ್ಕಿಗೇ ಧಕ್ಕೆ ಬಂದಿದೆ ಎಂದು ಆರೋಪಿಸಿದ್ದಾರೆ.
ಯುವ ನಾಯಕ ಉಸ್ಮಾನ್ ಹಾದಿ ಮರಣಾನಂತರ ಢಾಕಾ ಸೇರಿದಂತೆ ಹಲವು ಪ್ರದೇಶಗಳು ಬೂದಿಮುಚ್ಚಿದ ಕೆಂಡದಂತಿವೆ. ಎಲ್ಲೆಡೆ ವಿಧ್ವಂಸಕ ಕೃತ್ಯಗಳು, ಬೆಂಕಿಹಚ್ಚುವಿಕೆ, ಗಲಭೆಗಳು ಮುಂದುವರಿದಿವೆ. ಛಾಯಾನೋಟ್, ಉಡಿಚಿಯಂತಹ ಸಾಂಸ್ಕೃತಿಕ ಸಂಸ್ಥೆಗಳು ಹಾಗೂ ಪತ್ರಿಕಾ ಕಚೇರಿಗಳ ಮೇಲೂ ದಾಳಿ ನಡೆಸಲಾಗುತ್ತಿದೆ.























