Home Advertisement
Home ಸುದ್ದಿ ವಿದೇಶ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ

ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ

0
15

ಇಡೀ ಮಧ್ಯಪ್ರಾಚ್ಯದ ಭೂಪಟವನ್ನೇ ಬದಲಿಸಬಲ್ಲ ಮಹಾಸ್ಫೋಟ, ಇರಾನ್‌ನ ಪಾಲಿಗೆ ಇಂದು ಇತಿಹಾಸದ ಅತ್ಯಂತ ಕರಾಳ ಮತ್ತು ರಕ್ತಸಿಕ್ತ ಭಾನುವಾರ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್‌ನ ಸರ್ವೋಚ್ಚ ನಾಯಕನಾಗಿ, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸಿಂಹಸ್ವಪ್ನವಾಗಿದ್ದ ಅಯತೊಲ್ಲಾ ಅಲಿ ಖಮೇನಿ ಇನ್ನು ನೆನಪು ಮಾತ್ರ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಜಂಟಿ ವಾಯು ದಾಳಿಯಲ್ಲಿ 86 ವರ್ಷದ ಧರ್ಮಗುರು ಖಮೇನಿ ಹತರಾಗಿದ್ದಾರೆ ಎಂಬ ಸುದ್ದಿ ಜಗತ್ತನ್ನೇ ನಡುಗಿಸಿದೆ.

ಈ ಕಾರ್ಯಾಚರಣೆಯ ತೀವ್ರತೆ ಎಷ್ಟಿತ್ತೆಂದ್ರೆ, ಇರಾನ್ ಅಧಿಕೃತವಾಗಿ ಈ ಸುದ್ದಿಯನ್ನು ಹೊರಹಾಕುವ ಮೊದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹತ್ಯೆಯನ್ನು ಖಚಿತಪಡಿಸಿದ್ದರು. “ನಮ್ಮ ಶತ್ರುಗಳ ಅಂತ್ಯ ಆರಂಭವಾಗಿದೆ” ಎಂಬ ಟ್ರಂಪ್ ಮಾತುಗಳು ಇರಾನ್‌ನ ಇಡೀ ಆಡಳಿತ ಯಂತ್ರವನ್ನೇ ಅಲುಗಾಡಿಸಿವೆ. ಭಾನುವಾರ ಮುಂಜಾನೆ ಇರಾನ್ ಸರ್ಕಾರಿ ದೂರದರ್ಶನವು ದುಃಖತಪ್ತ ದನಿಯಲ್ಲಿ ಈ ಸಾವನ್ನು ದೃಢಪಡಿಸಿದಾಗ, ಇಡೀ ಟೆಹರಾನ್ ಸ್ತಬ್ಧವಾಗಿತ್ತು.

ಇದು ಕೇವಲ ಒಬ್ಬ ವ್ಯಕ್ತಿಯ ಹತ್ಯೆಯಲ್ಲ, ಇರಾನ್‌ನ ಇಡೀ ರಕ್ಷಣಾ ಕೋಟೆಯನ್ನೇ ಭೇದಿಸಿದ ದಾಳಿ. ಖಮೇನಿ ನೆರಳಿನಂತಿದ್ದ ಉನ್ನತ ರಾಜತಾಂತ್ರಿಕ ಸಲಹೆಗಾರ ಅಲಿ ಶಮ್ಯಾನಿ ಮತ್ತು ಇರಾನ್‌ನ ಅತ್ಯಂತ ಪ್ರಭಾವಶಾಲಿ ರೆವಲ್ಯೂಷನರಿ ಗಾರ್ಡ್ಸ್ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಕ್ಕೂರ್ ಕೂಡ ಈ ದಾಳಿಯಲ್ಲಿ ಮಣ್ಣಾಗಿದ್ದಾರೆ ಎಂದು ಇಸ್ರೇಲ್ ಸೇನೆ ಘೋಷಿಸಿದೆ. ದುರಂತವೆಂದ್ರೆ ಈ ಭೀಕರ ದಾಳಿಯು ಖಮೇನಿ ಕುಟುಂಬವನ್ನೂ ಬಿಟ್ಟಿಲ್ಲ. ಅವರ ಮಗಳು, ಅಳಿಯ ಮತ್ತು ಎಳೆಯ ಮೊಮ್ಮಗಳು ಕೂಡ ಈ ಸ್ಫೋಟದಲ್ಲಿ ಬಲಿಯಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳು ಕಣ್ಣೀರು ಸುರಿಸುತ್ತಿವೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧದಿಂದಾಗಿ ವಿಮಾನ ರದ್ದು: ಪ್ರವಾಸಿಗರ ಪರದಾಟ

ಈ ಘಟನೆಯ ಬೆನ್ನಲ್ಲೇ ಪ್ರತಿಬಂಧಕ ದಾಳಿಯ ಜ್ವಾಲೆ ಎದ್ದಿದೆ. ಇರಾನ್ ಸುಮ್ಮನೆ ಕುಳಿತಿಲ್ಲ. ತನ್ನ ನಾಯಕನ ಸಾವಿಗೆ ಸೇಡು ತೀರಿಸಿಕೊಳ್ಳಲು ಮಧ್ಯಪ್ರಾಚ್ಯದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ಮಳೆಯನ್ನು ಸುರಿಸುತ್ತಿದೆ. ಅಬುಧಾಬಿಯಲ್ಲಿ ಇಬ್ಬರು ಮತ್ತು ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಓರ್ವ ನಾಗರಿಕ ಬಲಿಯಾಗಿದ್ದಾರೆ ಎಂಬ ಪ್ರಾಥಮಿಕ ವರದಿಗಳು ಲಭ್ಯವಾಗಿವೆ. ಅರಬ್ ಜಗತ್ತಿನಲ್ಲಿ ಈಗ ಯುದ್ಧದ ಕಾರ್ಮೋಡ ಕವಿದಿದೆ.

ಈಗ ಇಡೀ ವಿಶ್ವದ ಕಣ್ಣು ಇರಾನ್ ಮೇಲಿದೆ. ಖಮೇನಿ ನಂತರ ಇರಾನ್‌ನ ಚುಕ್ಕಾಣಿ ಹಿಡಿಯುವವರು ಯಾರು? ಈ ಹತ್ಯೆ ಮೂರನೇ ಮಹಾಯುದ್ಧಕ್ಕೆ ನಾಂದಿಯಾಗಲಿದೆಯೇ? ಜಗತ್ತು ಇಂದು ಒಂದು ಅಗೋಚರ ಯುದ್ಧದ ಅಂಚಿನಲ್ಲಿ ನಿಂತಿದೆ.