ಭಾರತೀಯ ಮೂಲದ ಖ್ಯಾತ ಅಮೆರಿಕನ್ ವಿಶ್ಲೇಷಕ ಮತ್ತು ದಕ್ಷಿಣ ಏಷ್ಯಾ ನೀತಿ ಸಲಹೆಗಾರರಾಗಿದ್ದ ಆಶ್ಲೇ ಟೆಲ್ಲಿಸ್ ಅಮೆರಿಕದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಅಮೆರಿಕ ಸರ್ಕಾರದ ರಹಸ್ಯ ದಾಖಲೆಗಳನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಈ ಘಟನೆ ಅಮೆರಿಕದ ಭದ್ರತಾ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
64 ವರ್ಷದ ಆಶ್ಲೇ ಟೆಲ್ಲಿಸ್, ತಮ್ಮ ವರ್ಜೀನಿಯಾದ ವಿಯೆನ್ನಾದಲ್ಲಿರುವ ಮನೆಯಲ್ಲಿ ಅಮೆರಿಕ ವಾಯುಪಡೆಯ ತಂತ್ರಗಳು ಮತ್ತು ವಿಧಾನಗಳಿಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ರಹಸ್ಯ ದಾಖಲೆಗಳನ್ನು ಹೊಂದಿದ್ದರು ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಶನಿವಾರ ಬಂಧಿತರಾದ ಟೆಲ್ಲಿಸ್ ವಿರುದ್ಧ ಸೋಮವಾರ ಅಧಿಕೃತವಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.
ರಾಷ್ಟ್ರೀಯ ಭದ್ರತಾ ಮಂಡಳಿ ಹಿನ್ನಲೆ: ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಆಡಳಿತದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕೆಲಸ ಮಾಡಿದ್ದ ಟೆಲ್ಲಿಸ್, ವಿದೇಶಾಂಗ ಇಲಾಖೆಗೆ ಗೌರವ ಸಲಹೆಗಾರರಾಗಿಯೂ ಮತ್ತು ಪೆಂಟಗನ್‌ನ ಆಫೀಸ್ ಆಫ್ ನೆಟ್ ಅಸೆಸ್‌ಮೆಂಟ್‌ನ ಗುತ್ತಿಗೆದಾರರಾಗಿಯೂ ಸೇವೆ ಸಲ್ಲಿಸಿದ್ದರು. ಅವರಂತಹ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿ ರಹಸ್ಯ ದಾಖಲೆಗಳನ್ನು ಸಂಗ್ರಹಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ರಹಸ್ಯ ಮಾಹಿತಿ ಸಂಗ್ರಹದ ಕುರುಹುಗಳು: ಅಮೆರಿಕ ಸೇನಾ ವಿಮಾನಗಳ ಸಾಮರ್ಥ್ಯಕ್ಕೆ ಸಂಬಂಧಿಸಿದ ಗೌಪ್ಯ ಕಡತಗಳನ್ನು 2025ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳ ಕಟ್ಟಡದಿಂದ ಸಂಗ್ರಹಿಸಿ, ಮುದ್ರಿಸಿ, ಲೆದರ್ ಬ್ರೀಫ್‌ಕೇಸ್‌ನಲ್ಲಿ ಹೊರಬರುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿವೆ ಎನ್ನಲಾಗಿದೆ.
ಈ ದೃಶ್ಯಾವಳಿಗಳ ಆಧಾರದ ಮೇಲೆ ಅಕ್ಟೋಬರ್ 11 ರಂದು ಟೆಲ್ಲಿಸ್ ನಿವಾಸದಲ್ಲಿ ಶೋಧ ನಡೆಸಲಾಯಿತು. ಈ ಶೋಧ ಕಾರ್ಯದ ವೇಳೆ ಲಾಕ್ ಮಾಡಿದ್ದ ಫೈಲಿಂಗ್ ಕ್ಯಾಬಿನೆಟ್‌ಗಳು, ನೆಲಮಾಳಿಗೆಯ ಕಚೇರಿಯ ಮೇಜು, ಸಂಗ್ರಹಣಾ ಕೊಠಡಿ ಮತ್ತು ಕಸದ ಬುಟ್ಟಿಯಲ್ಲಿಯೂ ರಹಸ್ಯ ದಾಖಲೆಗಳು ಪತ್ತೆಯಾಗಿವೆ.
ಚೀನಾ ಜೊತೆಗಿನ ನಂಟು ಅನುಮಾನಗಳು: ಅಫಿಡವಿಟ್ ಪ್ರಕಾರ, ಟೆಲ್ಲಿಸ್ ಕಳೆದ ಕೆಲವು ವರ್ಷಗಳಿಂದ ಹಲವಾರು ಬಾರಿ ಚೀನಾ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. 2023ರ ಏಪ್ರಿಲ್‌ನಲ್ಲಿ, ವಾಷಿಂಗ್ಟನ್ ಡಿಸಿ ಉಪನಗರದಲ್ಲಿ ನಡೆದ ಔತಣಕೂಟವೊಂದರಲ್ಲಿ ಚೀನಾ ಅಧಿಕಾರಿಗಳನ್ನು ಭೇಟಿ ಮಾಡಿ ಇರಾನ್-ಚೀನಾ ಸಂಬಂಧಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಭೇಟಿಗಳ ವೇಳೆ ಟೆಲ್ಲಿಸ್ ಒಂದು ಎನ್ವಲಪ್ ತಂದಿದ್ದು, ಅದನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿಲ್ಲ. ಇದು ಚೀನಾ ಅಧಿಕಾರಿಗಳಿಗೆ ಏನನ್ನೋ ನೀಡಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಇನ್ನು ಎರಡು ಬಾರಿ, ಚೀನಾ ಅಧಿಕಾರಿಗಳು ಟೆಲ್ಲಿಸ್ಗೆ ಉಡುಗೊರೆ ಚೀಲಗಳನ್ನು ನೀಡಿದ್ದರು. ಈ ಘಟನೆಗಳು ಟೆಲ್ಲಿಸ್ ಮತ್ತು ಚೀನಾ ಅಧಿಕಾರಿಗಳ ನಡುವೆ ಅನುಮಾನಾಸ್ಪದ ಸಂಬಂಧ ಇರುವುದನ್ನು ಬಲವಾಗಿ ಸೂಚಿಸುತ್ತವೆ ಎಂದು ಎಫ್‌ಬಿಐ ಅಫಿಡವಿಟ್‌ನಲ್ಲಿ ತಿಳಿಸಿದೆ.
ಆಶ್ಲೇ ಟೆಲ್ಲಿಸ್ ಹಿನ್ನೆಲೆ:ಮುಂಬೈನಲ್ಲಿ ಜನಿಸಿದ ಆಶ್ಲೇ ಟೆಲ್ಲಿಸ್, ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ತಮ್ಮ ಅಧ್ಯಯನ ಪೂರೈಸಿದರು. ನಂತರ ಚಿಕಾಗೋ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಎಂಎ ಮತ್ತು ಪಿಎಚ್‌ಡಿ ಪದವಿಗಳನ್ನು ಪಡೆದರು.
2001 ರಲ್ಲಿ ಅಮೆರಿಕ ಸರ್ಕಾರ ಸೇರಿ, ಭಾರತ ಮತ್ತು ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದಂತೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಆಡಳಿತಗಳಿಗೆ ಸಲಹೆ ನೀಡಿದ್ದರು. ಅಮೆರಿಕ-ಭಾರತ-ಚೀನಾ ನೀತಿ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು, ತಮ್ಮ ಬರಹಗಳಿಂದ ವಾಷಿಂಗ್ಟನ್, ನವದೆಹಲಿ ಮತ್ತು ಬೀಜಿಂಗ್‌ನಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.