ಆಸ್ಪತ್ರೆ ಮೇಲೆ ಏರ್ ಸ್ಟ್ರೈಕ್? ಅಫ್ಘಾನ್–ಪಾಕ್ ಸಂಘರ್ಷ ತಾರಕಕ್ಕೆ
ಕಾಬೂಲ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿರುವ ನಡುವೆ, ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಪುನರ್ವಸತಿ ಆಸ್ಪತ್ರೆಯ ಮೇಲೆ ನಡೆದ ಭೀಕರ ವಾಯುದಾಳಿಯಲ್ಲಿ ಕನಿಷ್ಠ 400 ಮಂದಿ ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರ ಹೇಳಿದೆ.
ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಕಾಬೂಲ್ ನಗರದಲ್ಲಿರುವ ‘ಓಮಿದ್’ (Omid) ಹೆಸರಿನ ಸುಮಾರು 2,000 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ಆಸ್ಪತ್ರೆಯ ಬಹುತೇಕ ಕಟ್ಟಡಗಳು ಧ್ವಂಸವಾಗಿವೆ.
ಮೃತರ ಸಂಖ್ಯೆ ಏರಿಕೆಯಾಗುವ ಭೀತಿ : ಅಫ್ಘಾನಿಸ್ತಾನ ಸರ್ಕಾರದ ವಕ್ತಾರ ಹಮ್ಹುಲ್ಲಾ ಫಿತ್ರತ್ ಮಾಹಿತಿ ನೀಡಿದ್ದು, ಅವಶೇಷಗಳಡಿ ಇನ್ನೂ ಹಲವು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ನಿರಾಕರಣೆ : ಆದರೆ, ಈ ಆರೋಪವನ್ನು ಪಾಕಿಸ್ತಾನ ಸಂಪೂರ್ಣ ತಿರಸ್ಕರಿಸಿದ್ದು, ತಾವು ಕೇವಲ “ಭಯೋತ್ಪಾದಕರ ಅಡಗುತಾಣಗಳು ಹಾಗೂ ಮಿಲಿಟರಿ ನೆಲೆಗಳು” ಮೇಲೆ ಮಾತ್ರ ದಾಳಿ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದೆ. ನಾಗರಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪಾಕಿಸ್ತಾನ ಸಮರ್ಥಿಸಿಕೊಂಡಿದೆ.
ಗಡಿ ಸಂಘರ್ಷ ತೀವ್ರ : ಕಳೆದ ಒಂದು ತಿಂಗಳಿನಿಂದ ಉಭಯ ದೇಶಗಳ ನಡುವೆ ಗಡಿ ಸಂಘರ್ಷ ಹೆಚ್ಚಾಗಿದ್ದು, ಪಾಕಿಸ್ತಾನ ಅಫ್ಘಾನಿಸ್ತಾನ ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸುತ್ತಿದೆ. ಇತ್ತ ಅಫ್ಘಾನಿಸ್ತಾನ, ಪಾಕಿಸ್ತಾನದ ದಾಳಿಯನ್ನು ತನ್ನ ಸಾರ್ವಭೌಮತ್ವದ ಉಲ್ಲಂಘನೆ ಎಂದು ಖಂಡಿಸಿದೆ.
ಜಾಗತಿಕ ಆತಂಕ : ಕಾಬೂಲ್‌ನಲ್ಲಿರುವ ಈ ಆಸ್ಪತ್ರೆ ಮೇಲೆ ನಡೆದ ದಾಳಿ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದ್ದು, ನಾಗರಿಕರ ಮೇಲೆ ದಾಳಿ ನಡೆದಿದ್ದರೆ ಅದು ಗಂಭೀರ ಮಾನವ ಹಕ್ಕು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈ ಘಟನೆಗೆ ಅಂತರರಾಷ್ಟ್ರೀಯ ಸಮುದಾಯದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.






















