ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಉತ್ತರ ಕರ್ನಾಟಕಕ್ಕೆ ಗುಡ್‌ನ್ಯೂಸ್

0
212

ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಬೆಳಗಾವಿ ಎರಡೂ ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಎಲ್ಲ ಮೂಲಸೌಕರ್ಯ ಹೊಂದಿವೆ. ಈ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದರಿಂದ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾದ ಕೆಲ ಭಾಗಗಳಲ್ಲಿ ವಾಯು ಸಂಪರ್ಕವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕುರಿತಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಮಧ್ಯಪ್ರಾಚ್ಯ ದೇಶಗಳು, ಸಿಂಗಪುರ ಸೇರಿದಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ವಿಮಾನ ಸಂಚಾರ ಸುಗಮವಾಗಲಿದೆ. ಇದರೊಂದಿಗೆ ಇ-ಕಾಮರ್ಸ್ ಅಭಿವೃದ್ಧಿಯಾಗಲಿದೆ ಎಂದಿದ್ದಾರೆ. ಉತ್ತರ ಕರ್ನಾಟಕದ ಈ ಪ್ರಮುಖ ಎರಡೂ ನಗರಗಳು ಮುಂದಿನ ದಿನಗಳಲ್ಲಿ ಲಾಜಿಸ್ಟಿಕ್ಸ್ ಹಬ್ ಆಗಲಿವೆ ಎಂದು ಹೇಳಿದ್ದಾರೆ.

ಅಲ್ಲದೇ ವಾಯು ಸಂಪರ್ಕ ಹೆಚ್ಚಳದಿಂದಾಗಿ ಈ ಪ್ರದೇಶದ ಶಿಕ್ಷಣ, ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಪ್ರಮುಖ ಉತ್ತೇಜನವನ್ನು ನೀಡಿದಂತಾಗುತ್ತದೆ. ಇದರೊಂದಿಗೆ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧಗೊಂಡಿದ್ದು, ತ್ವರಿತ ಪರಿಸರ ಅನುಮತಿ ನೀಡಬೇಕು. ಪರಿಸರ ಸಚಿವಾಲಯದ ಅಂತಿಮ ಅನುಮೋದನೆಯೊಂದೇ ವಿಜಯಪುರ ವಿಮಾನ ನಿಲ್ದಾಣಕ್ಕೆ ಬಾಕಿ ಇದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ: ಹುಬ್ಬಳ್ಳಿ, ಬೆಳಗಾವಿ ಎರಡೂ ವಿಮಾನ ನಿಲ್ದಾಣಗಳಲ್ಲಿ ಗಂಟೆಗೆ 2,400 ಪ್ರಯಾಣಿಕರನ್ನು ನಿರ್ವಹಿಸಬಲ್ಲ ಆಧುನಿಕ ಹೊಸ ಟರ್ಮಿನಲ್‌ ನಿರ್ಮಿಸಲಾಗುತ್ತಿದೆ. A320 ಮತ್ತು A321 ದರ್ಜೆಯ ವಿಮಾನಗಳ ಕಾರ್ಯಾಚರಣೆ ಅನುಕೂಲವಾಗುವ ರೀತಿಯಲ್ಲಿ 12 ಪಾರ್ಕಿಂಗ್‌ ಬೇ ಅಭಿವೃದ್ಧಿಪಡಿಸಲಾಗುತ್ತಿದೆ. ರಾತ್ರಿ ಸಮಯದಲ್ಲೂ ವಿಮಾನ ಲ್ಯಾಂಡಿಂಗ್‌ ಆಗುವಂತೆ ರನ್‌ವೇಗಳು. ಜತೆಗೆ ಬೆಳಗಾವಿಯಿಂದ ಫೌಂಡ್ರಿ, ಏರೋಸ್ಪೇಸ್‌ ಸಾಧನಗಳು, ಸರಕುಗಳನ್ನು ಸಾಗಿಸಲು ಪ್ರತ್ಯೇಕ ಟರ್ಮಿನಲ್‌ ಮಾಡಲಾಗಿದೆ ಎಂದಿದ್ದಾರೆ.

ಕರ್ನಾಟಕ ರಾಜ್ಯವನ್ನು ನಾಗರಿಕ ವಿಮಾನಯಾನ ವಲಯದಲ್ಲಿ ಪಾಲುದಾರ (ಸ್ಟೇಕ್‌ಹೋಲ್ಡರ್‌) ಎಂದು ಪರಿಗಣಿಸಬೇಕು. ಇದರಿಂದಾಗಿ ರಾಜ್ಯದ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಮೈಸೂರು ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಂದಲೂ ರಾಜ್ಯಕ್ಕೆ ಲಾಭ ಸಿಗಲಿದೆ ಎಂದು ಸಚಿವರಿಗೆ ತಿಳಿಸಿದ್ದಾರೆ.

ಮೇ 2025ರ ದತ್ತಾಂಶದ ಪ್ರಕಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆ ಕಳೆದ ಬಾರಿಗಿಂತ ಶೇ. 37.1 ರಷ್ಟು ಏರಿಕೆಯಾಗಿದೆ. ಆದರೆ, ಬೆಳಗಾವಿ ವಿಮಾನ ನಿಲ್ದಾಣ ಪ್ರತಿಶತ 12ರಷ್ಟು ಕುಸಿತವನ್ನು ಕಂಡಿದೆ. ಇದಕ್ಕೆ ವಿಮಾನಯಾನ ಸೇವೆ ಕಡಿತಗೊಳೀಸಿರುವುದೇ ಮುಖ್ಯ ಕಾರಣವಾಗಿದೆ. ಉಡಾನ್ ಯೋಜನೆಯು ಗುಣಮಟ್ಟದ ಸೇವೆ ಮತ್ತು ಕಾರ್ಯತಂತ್ರದ ಸಂಪರ್ಕ ಹೆಚ್ಚಿನ ಜನರನ್ನು ತನ್ನತ್ತ ಸೆಳೆಯುತ್ತದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಸಲಹಾ ಸಮಿತಿಯ ಸದಸ್ಯ ಕೌಸ್ತುಭ ಸಂಶಿಕರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ತೀರ್ಮಾನಿಸಿದೆ. ಇದಕ್ಕಾಗಿ ಮೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್‌ ಮಾಡಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಮೂರು ಸ್ಥಳಗಳನ್ನು ಪರಿಶೀಲಿಸಿದೆ. ಶೀಘ್ರ ಒಂದು ಸ್ಥಳವನ್ನು ಆಯ್ಕೆ ಮಾಡಿದರೆ, ರಾಜ್ಯ ಸರಕಾರ ತಕ್ಷಣವೇ ಭೂಸ್ವಾಧೀನ ಮತ್ತು ಮುಂದಿನ ಕೆಲಸ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

Previous articleGovernment Employee: ಸರ್ಕಾರದ ಮುಂದೆ ರಾಜ್ಯ ಸರ್ಕಾರಿ ನೌಕರರ ಹೊಸ ಬೇಡಿಕೆ
Next articleಉತ್ತರ ಕರ್ನಾಟಕ ಪ್ರವಾಸಿಗರಿಗೆ ಸಿಗಂದೂರು ಈಗ ಹಾಟ್ ಸ್ಪಾಟ್

LEAVE A REPLY

Please enter your comment!
Please enter your name here