ನವದೆಹಲಿ: F4 ಇಂಡಿಯನ್ ಚಾಂಪಿಯನ್‌ಶಿಪ್ ಮತ್ತು ಇಂಡಿಯನ್ ರೇಸಿಂಗ್ ಲೀಗ್ (IRL) ಪಂದ್ಯದ ಡ್ರೈವರ್ ಡ್ರಾಫ್ಟ್ ದಿನಾಂಕ ಬಿಡುಗಡೆ ಆಗಿದೆ. 2019 ರಲ್ಲಿ ಮೊದಲು ಘೋಷಿಸಲಾದ IRL ನ ಐದನೇ ಆವೃತ್ತಿ ಈ ವರ್ಷದ ಆಗಸ್ಟ್‌ನಲ್ಲಿ ನಡೆಯಲಿದೆ.
ಐದು ಸುತ್ತುಗಳನ್ನು ಒಳಗೊಂಡಿರುವ ಚಾಂಪಿಯನ್‌ಶಿಪ್ ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇ, ಚೆನ್ನೈನ ಮದ್ರಾಸ್ ರೇಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ಮತ್ತು ಬೆಂಗಳೂರಿನ ಬ್ರೆನ್ ರೇಸ್‌ವೇಯಲ್ಲಿ ನಡೆಯಲಿದೆ.
2025 ರ ಋತುವಿನಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡವು ಎರಡು ಕಾರುಗಳು ಮತ್ತು ನಾಲ್ಕು ರೇಸರ್‌ಗಳನ್ನು ಕಣಕ್ಕಿಳಿಸಬೇಕಾಗುತ್ತದೆ. ಇಂಡಿಯನ್ ರೇಸಿಂಗ್ ಲೀಗ್ ಡ್ರೈವರ್ ಡ್ರಾಫ್ಟ್ ಜುಲೈ 15ರಂದು ಮುಂಬೈನಲ್ಲಿ ನಡೆಯಲಿದೆ. ಪ್ರತಿ ತಂಡವು ಕನಿಷ್ಠ ಒಬ್ಬ ಮಹಿಳಾ ಚಾಲಕಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025 ಈ ಆಗಸ್ಟ್‌ನಲ್ಲಿ ಆರಂಭವಾಗಲಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಮತ್ತು ಇತರ ಪ್ರದೇಶಗಳ ಫ್ರಾಂಚೈಸಿ ತಂಡಗಳು ರೋಮಾಂಚಕ ಬೀದಿ ಸರ್ಕ್ಯೂಟ್‌ಗಳು ಮತ್ತು ವಿಶ್ವ ದರ್ಜೆಯ ಟ್ರ್ಯಾಕ್‌ಗಳಲ್ಲಿ ಸ್ಪರ್ಧಿಸಲಿವೆ.
ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಈ ಭಾರಿ ಐಆರ್‌ಎಲ್‌ನ ಹೊಸದಾಗಿ ಪ್ರವೇಶ ಮಾಡಿದ್ದು ಬೆಂಗಳೂರಿನ ಫ್ರಾಂಚೈಸಿಯನ್ನು ವಹಿಸಿಕೊಂಡಿದ್ದಾರೆ. ತಂಡಕ್ಕೆ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಎಂದು ಮರುನಾಮಕರಣ ಮಾಡಿದ್ದಾರೆ. 2024 ರ ಋತುವಿನಲ್ಲಿ ರಿಶನ್ ರಾಜೀವ್, ಕೈಟ್ಲಿನ್ ವುಡ್, ಜೂಲಿಯಸ್ ಡೈನೆಸೆನ್, ಕೈಲ್ ಕುಮಾರನ್‌ರಂತಹ ಚಾಲಕರನ್ನು ಈ ತಂಡ ಒಳಗೊಂಡಿತ್ತು.
ತೆಲಗು ಚಿತ್ರರಂಗದ ನಟ ನಾಗಚೈತನ್ಯ ಒಡೆತನದ ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್, ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಭಾಗವಹಿಸಲಿದೆ. ಬಾಲಿವುಡ್ ನಟ ಜಾನ್ ಅಬ್ರಹಾಂ ಅವರ ನೇತೃತ್ವದ ಗೋವಾ ಏಸಸ್ ಜೆಎ ರೇಸಿಂಗ್ ಕಳೆದ 2024 ರ ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ತಂಡಗಳ ಚಾಂಪಿಯನ್‌ಶಿಪ್ ಮತ್ತು ಎಂಟ್ರೆಂಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಒಡೆತನದ ಕೋಲ್ಕತ್ತಾ ರಾಯಲ್ ಟೈಗರ್ಸ್, 2024 ರಲ್ಲಿ ಇಂಡಿಯನ್ ರೇಸಿಂಗ್ ಲೀಗ್‌ಗೆ ಪದಾರ್ಪಣೆ ಮಾಡಿತ್ತು. ಬಾಲಿವುಡ್ ನಟ ಅರ್ಜುನ್ ಕಪೂರ್ ಒಡೆತನದ ಸ್ಪೀಡ್ ಡೆಮನ್ಸ್ ದೆಹಲಿ ತಂಡ ಹಾಗೂ ಅಕಾರ್ಡ್ ಗ್ರೂಪ್ ಮತ್ತು ಭಾರತ್ ಇನ್ಸ್ಟಿಟ್ಯೂಟ್ ಒಡೆತನದ ಚೆನ್ನೈ ಟರ್ಬೋ ರೈಡರ್ಸ್ ಸೇರಿ ಒಟ್ಟು ತಂಡಗಳ F4 ಇಂಡಿಯನ್ ಚಾಂಪಿಯನ್‌ಶಿಪ್ ಮತ್ತು ಇಂಡಿಯನ್ ರೇಸಿಂಗ್ ಲೀಗ್ ನಡೆಯಲಿದೆ.