ಕಳೆದ 5 ಚುನಾವಣೆಗಳನ್ನು ಗಮನಿಸಿದರೆ 2022ರಲ್ಲಿ ಜಗದೀಪ್ ಧನ್ಕರ್ (ಎನ್‌ಡಿಎ) ಅವರು ಪಡೆದ ಮತವೇ (74.37%) ಅತ್ಯಧಿಕ. ಒಂದೋ ಈಗ ಅದನ್ನು ಹಾಗೇ ಉಳಿಸಿಕೊಳ್ಳಬೇಕು ಅಥವಾ ಅದಕ್ಕಿಂತಲೂ ಹೆಚ್ಚ ಮತಗಳಿಂದ ಹೊಸ ಅಭ್ಯರ್ಥಿ ರಾಧಾಕೃಷ್ಣನ್ ಅವರನ್ನು ಗೆಲ್ಲಿಸಿಕೊಂಡು ಬರಬೇಕು – ಇದು ಸದ್ಯಕ್ಕೆ ಮೋದಿ ಮುಂದಿರುವ ಸವಾಲು. ಎನ್‌ಡಿಎ ಅಭ್ಯರ್ಥಿ ಗೆಲ್ಲುವುದಂತೂ ನಿಶ್ಚಿತ. ಆದರೆ ಜಗದೀಪ್ ಧನ್ಕರ್ ಅವರಷ್ಟೇ ಅಥವಾ ಅವರಿಗಿಂತ ಹೆಚ್ಚಿನ ಮತಗಳನ್ನು ಪಡೆದು ಹೊಸ ಅಭ್ಯರ್ಥಿಯನ್ನು ಮೋದಿ ಗೆಲ್ಲಿಸಿಕೊಂಡು ಬರುತ್ತಾರಾ ಎನ್ನುವುದು ಸದ್ಯದ ಕುತೂಹಲ. ಧನ್ಕರ್ ಕೆಳಗಿಳಿಯಲು ಮೋದಿ ಸರ್ಕಾರವೇ ಕಾರಣ ಎಂದು ವಿಪಕ್ಷ ಆರೋಪಿಸುತ್ತಿರುವ ಮಧ್ಯೆ ರಾಧಾಕೃಷ್ಣನ್‌ರನ್ನು ಅವರಿಗಿಂತ ಹೆಚ್ಚು ಮತದಿಂದ ಗೆಲ್ಲಿಸಿಕೊಂಡು ಬರುವುದು ಮೋದಿಗೆ ನಿಜಕ್ಕೂ ಪ್ರತಿಷ್ಠೆಯ ವಿಷಯವಾಗಿದೆ ಎಂದು ಹೇಳಲಾಗುತ್ತಿದೆ.
ಇಂಡಿಯಾ ಮಿತ್ರಕೂಟದ ಸ್ಪರ್ಧೆ ಗ್ಯಾರಂಟಿ: 1997ರಿಂದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳು ಸತತವಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಲೇ ಬಂದಿವೆ. ಅದೇ ರೀತಿ ಈ ಸಲವೂ ಇಂಡಿಯಾ ಕೂಟ ವೀಪಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಆದರೆ ರಾಜಕೀಯಕ್ಕೆ ಸಂಬಂಧಿಸಿರದ ವ್ಯಕ್ತಿಯನ್ನು ವಿಪಕ್ಷ ಈ ಸಲ ಅಭ್ಯರ್ಥಿಯಾಗಿ ಘೋಷಿಸಬಹುದು ಎಂದು ಅಂದಾಜಿಸಲಾಗಿದ್ದು, ಆ ಮೂಲಕವಾದರೂ ನಾಮನಿರ್ದೇಶಿತ ಹಾಗೂ ಇನ್ನಿತರ ಕೆಲ ಪಕ್ಷಗಳು ಮತ್ತು ಸಂಸದರ ಮತ ಪಡೆಯುವ ತಂತ್ರ ಹೆಣೆದಿದೆ ಎನ್ನಲಾಗಿದೆ.
ಬಿಜೆಪಿ ನೇತೃತ್ವಕ್ಕೆ ಸಾಫ್ಟ್ ವಿರೋಧಿಗಳ ಸಾಥ್ ಅನಿವಾರ್ಯ: ಚುನಾವಣೆಯಲ್ಲಿ ಧನ್ಕರ್‌ಗಿಂತ ಹೆಚ್ಚಿನ ಮತ ಪಡೆಯಲು ಅಥವಾ ಅವರ ಮತಗಳಿಕೆಗಿಂತ ಕೆಳಗಿಳಿಯದಿರಲು ರಾಧಾಕೃಷ್ಣನ್ ಅವರಿಗೆ ಎನ್‌ಡಿಎಯ ಸಾಫ್ಟ್ ವಿರೋಧಿಗಳ ಸಾಥ್ ಬೇಕಾಗುತ್ತದೆ. ಈ ಪಟ್ಟಿಯಲ್ಲಿ ನವೀನ್ ಪಟ್ನಾಯಕ್ ಅವರ ಬಿಜೆಡಿ ಹಾಗೂ ಜಗನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷಗಳಿವೆ. ಆದರೆ ಈ ಪಾರ್ಟಿಗಳ ಸಂಸದರ ಮತವನ್ನು ಪಡೆಯುವಲ್ಲಿ ಮೋದಿ-ಶಾ ಜೋಡಿ ಯಾವ ರಣತಂತ್ರ ಮಾಡುತ್ತದೆ ಎಂಬುದು ಎಲ್ಲರ ಕುತೂಹಲ.
ಎನ್‌ಡಿಎ ಮೈತ್ರಿಕೂಟದ ಬಳಿ ಇರೋದು 55% ಗಿಂತ ಕಡಿಮೆ ಮತ: ಪ್ರಸ್ತುತ ಎನ್‌ಡಿಎ ಶೇ. 55ಕ್ಕಿಂತ ಕಡಿಮೆ ಮತಗಳನ್ನು ಹೊಂದಿದೆ. ಆದರೆ ಇಂಡಿಯಾ ಕೂಟದ ಜತೆ ಅಷ್ಟಾಗಿ ಸರಿಯಿರದ ಪಕ್ಷಗಳು ಒಂದೊಮ್ಮೆ ರಾಧಾಕೃಷ್ಣನ್ ಪರ ಮತ ಚಲಾಯಿಸಿದರೆ ಈ ಮತ ಪ್ರಮಾಣ ಸ್ವಲ್ಪ ಮೇಲಕ್ಕೇರಬಹುದು. ಇದು ಸಾಧ್ಯವಾಗಬೇಕಾದರೆ ವಿಪಕ್ಷ ಕೂಟದ ಜತೆ ಮುನಿಸಿ ಕಟ್ಟಿಕೊಂಡಿರುವ ಆಮ್ ಆದ್ಮಿ ಪಕ್ಷ, ತಟಸ್ಥವಾಗಿರುವ ಯುಪಿಯ ಬಿಎಸ್‌ಪಿ, ಶಿರೋಮಣಿ ಅಕಾಲಿ ದಳ, ಬಿಆರ್‌ಎಸ್, ಎಎಸ್‌ಪಿ (ಕೆಆರ್), ಝಡ್‌ಪಿಎಂ, ಎಂಎನ್‌ಎಫ್ ಮತ್ತು ಸ್ವತಂತ್ರರು ಎನ್‌ಡಿಎಗೆ ಬೆಂಬಲಿಸಬೇಕು. ಈ ಎಲ್ಲರೂ ಒಟ್ಟುಗೂಡಿದರೆ 5.6%ನಷ್ಟು ಮತ ಮೋದಿ ಅಭ್ಯರ್ಥಿಯ ತೆಕ್ಕೆಗೆ ಬರುತ್ತವೆ.
ದಾಖಲೆ ಬರೆದಿದ್ದ ಧನ್ಕರ್: 1992ರಲ್ಲಿ ಆರ್.ಕೆ. ನಾರಾಯಣ್ ಅವರು ಶೇ. 99.86 ಮತಗಳನ್ನು ಪಡೆದು ಉಪರಾಷ್ಟ್ರಪತಿ ಚುನವಾಣೆಯನ್ನು ಗೆದ್ದಿದ್ದರು. ಇದು ಭಾರತದ ವೀಪಿ ಎಲೆಕ್ಷನ್‌ಗಳ ಇತಿಹಾಸದಲ್ಲಿ ಇಂದಿಗೂ ಯಾರಿಂದಲೂ ಮುರಿಯಲಾಗದಿರುವ ದಾಖಲೆ. ಆದರೆ 2022ರಲ್ಲಿ 74% ಗಿಂತ ಹೆಚ್ಚು ಮತಗಳನ್ನು ಪಡೆದಿದ್ದ ಧನ್ಕರ್ ಅವರು 2ನೇ ಸ್ಥಾನವನ್ನು ಅಲಂಕರಿಸಿದ್ದರು. ಅಷ್ಟರ ಮಟ್ಟಿಗೆ ಅವರದ್ದೂ ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ದಾಖಲಾಗಬೇಕಾದ ದಾಖಲೆ.
ಕಳೆದ 5 ಚುನಾವಣೆಗಳು
2002: ಬಿ.ಎಸ್.ಶೇಖಾವತ್ 59.82% ಎನ್‌ಡಿಎ
2007: ಹಮೀದ್ ಅನ್ಸಾರಿ 60.05% ಯುಪಿಎ
2012: ಹಮೀದ್ ಅನ್ಸಾರಿ 67.31% ಯುಪಿಎ
2017: ವೆಂಕಯ್ಯ ನಾಯ್ಡು 67.89% ಎನ್‌ಡಿಎ
2022: ಜಗದೀಪ್ ಧನ್ಕರ್ 74.37% ಎನ್‌ಡಿಎ