‘ನರೇಗಾ’ಗೆ ಪರ್ಯಾಯ VB—G RAM G ಕಾಯ್ದೆಗೆ ರಾಷ್ಟ್ರಪತಿ ಅಂಕಿತ

0
5

ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ಖಾತರಿ

ನವದೆಹಲಿ: ಗ್ರಾಮೀಣ ಉದ್ಯೋಗ ನೀತಿಯಲ್ಲಿ ಮಹತ್ವದ ಬದಲಾವಣೆಯಾಗಿ, ‘ನರೇಗಾ’ ಯೋಜನೆಗೆ ಪರ್ಯಾಯವಾಗಿ ರೂಪಿಸಲಾಗಿರುವ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ)’ (VB-G RAMG) ಮಸೂದೆಗೆ ರಾಷ್ಟ್ರಪತಿ ದೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಇದರೊಂದಿಗೆ ಮಸೂದೆ ಇದೀಗ ಅಧಿಕೃತವಾಗಿ ಕಾಯ್ದೆಯಾಗಿದೆ.

“ಈ ಕಾಯ್ದೆಯು ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷಕ್ಕೆ 125 ದಿನಗಳ ಶಾಸನಬದ್ಧ ವೇತನದ ಉದ್ಯೋಗ ಖಾತರಿ ನೀಡುತ್ತದೆ. ಜತೆಗೆ ಸಬಲೀಕರಣ, ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಮೃದ್ಧ ಹಾಗೂ ಸ್ವಾವಲಂಬಿ ಗ್ರಾಮೀಣ ಭಾರತಕ್ಕೆ ಭದ್ರ ಅಡಿಪಾಯ ಒದಗಿಸುತ್ತದೆ. ಇದು ಗ್ರಾಮೀಣ ಉದ್ಯೋಗ ನೀತಿಯ ರೂಪಾಂತರದಲ್ಲಿ ಮಹತ್ವದ ಮೈಲಿಗಲ್ಲು” ಎಂದು ರಾಷ್ಟ್ರಪತಿ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಮಹಾತ್ಮ ಗಾಂಧೀಜಿ ಹೆಸರನ್ನು ಅಳಿಸಿ ಗ್ರಾಮೀಣರ ಹಕ್ಕು ಕಸಿಯುವ VB-G RAM G ಬಿಲ್: ಸಚಿವ ಎಂ.ಬಿ. ಪಾಟೀಲ್ ಕಿಡಿ

ಈ ಮಸೂದೆಯನ್ನು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೇ ಕಳೆದ ಗುರುವಾರ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿ ಅಂಗೀಕರಿಸಲಾಗಿತ್ತು. ಲೋಕಸಭೆಯಲ್ಲಿ ಈ ಮಸೂದೆ ಕುರಿತು ಎಂಟು ಗಂಟೆಗಳಿಗೂ ಅಧಿಕ ಕಾಲ ಸುದೀರ್ಘ ಚರ್ಚೆ ನಡೆದಿದ್ದು, ಚರ್ಚೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಎತ್ತಿಹಿಡಿಯುತ್ತಲೇ ಗ್ರಾಮೀಣ ಭಾರತದ ಸಬಲೀಕರಣಕ್ಕೆ ಬದ್ಧವಾಗಿದೆ” ಎಂದು ಪ್ರತಿಪಾದಿಸಿದ್ದರು.

ಕೇಂದ್ರ ಸರ್ಕಾರದ ಪ್ರಕಾರ, ವಿಬಿ-ಜಿ ರಾಮ್ ಜಿ ಕಾಯ್ದೆಯು ಕೇವಲ ಕೂಲಿ ಆಧಾರಿತ ಉದ್ಯೋಗಕ್ಕೆ ಮಾತ್ರ ಸೀಮಿತವಾಗದೇ, ಜೀವನೋಪಾಯ ಅಭಿವೃದ್ಧಿ, ಕೌಶಲ್ಯ ವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸ್ವಾವಲಂಬನೆಗೆ ಒತ್ತು ನೀಡುವ ಸಮಗ್ರ ಕಾರ್ಯಕ್ರಮವಾಗಿದೆ. ಇದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಭದ್ರತೆ, ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಇದನ್ನೂ ಓದಿ: ದ್ವೇಷ ಭಾಷಣ ಮಸೂದೆ ಜನರ ಬಾಯಿ ಮುಚ್ಚಿಸುವ ಆದೇಶ: ಪ್ರಲ್ಹಾದ ಜೋಶಿ ಕಿಡಿ

ಆದರೆ ವಿರೋಧ ಪಕ್ಷಗಳು, ಈ ಕಾಯ್ದೆಯು ನರೇಗಾ ಯೋಜನೆಯ ಆತ್ಮವನ್ನೇ ದುರ್ಬಲಗೊಳಿಸುತ್ತದೆ ಹಾಗೂ ಗ್ರಾಮೀಣ ಬಡವರ ಹಕ್ಕುಗಳನ್ನು ಕಡಿಮೆ ಮಾಡುತ್ತದೆ ಎಂದು ಆರೋಪಿಸಿವೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ವಿಬಿ-ಜಿ ರಾಮ್ ಜಿ ಕಾಯ್ದೆ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಒಟ್ಟಿನಲ್ಲಿ, ರಾಷ್ಟ್ರಪತಿ ಅಂಕಿತದೊಂದಿಗೆ ಜಾರಿಯಾಗಿರುವ ವಿಬಿ-ಜಿ ರಾಮ್ ಜಿ ಕಾಯ್ದೆ, ಗ್ರಾಮೀಣ ಉದ್ಯೋಗ ನೀತಿಯಲ್ಲಿನ ಹೊಸ ಅಧ್ಯಾಯವಾಗಿ ಪರಿಗಣಿಸಲಾಗುತ್ತಿದ್ದು, ಇದರ ಪರಿಣಾಮ ಗ್ರಾಮೀಣ ಭಾರತದ ಮೇಲೆ ಹೇಗಿರಲಿದೆ ಎಂಬುದನ್ನು ಮುಂದಿನ ದಿನಗಳು ತೋರಿಸಬೇಕಿದೆ.

Previous articleವಿದೇಶಗಳಲ್ಲೂ ‘45’ ಅಬ್ಬರ: ಕೆನಡಾದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಸೋಲ್ಡ್ ಔಟ್