UPSC CSE 2025 Result: 958 ಅಭ್ಯರ್ಥಿಗಳ ಆಯ್ಕೆ – IASಗೆ 180 ಅಭ್ಯರ್ಥಿಗಳ ಆಯ್ಕೆ
ನವದೆಹಲಿ: Union Public Service Commission (UPSC) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಈ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾದಿದ್ದ ಸಾವಿರಾರು ಅಭ್ಯರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ.
ಈ ವರ್ಷದ ಫಲಿತಾಂಶದಲ್ಲಿ ಅನುಜ್ ಅಗ್ನಿಹೋತ್ರಿ ಮೊದಲ ರ‍್ಯಾಂಕ್ ಪಡೆಯುವ ಮೂಲಕ ದೇಶದ ಮಟ್ಟದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನವನ್ನು ರಾಜೇಶ್ವರಿ ಸುವೆ ಎಂ (Rajeshwari Suve M) ಪಡೆದಿದ್ದು, ಮೂರನೇ ಸ್ಥಾನವನ್ನು ಆಕಾಶ್ ಧುಲ್ (Akash Dhul) ಪಡೆದಿದ್ದಾರೆ.
ಕಳೆದ ವರ್ಷದ ಮೇ 25 ರಂದು ಪೂರ್ವಭಾವಿ ಪರೀಕ್ಷೆ (Preliminary Exam) ನಡೆದಿತ್ತು. ನಂತರ ಆಗಸ್ಟ್ 22ರಿಂದ 31ರವರೆಗೆ ನಡೆದ ಕಠಿಣ ಮುಖ್ಯ ಪರೀಕ್ಷೆ (Mains) ಯಲ್ಲಿ ಉತ್ತೀರ್ಣರಾದ 2,736 ಅಭ್ಯರ್ಥಿಗಳನ್ನು ಅಂತಿಮ ಸಂದರ್ಶನಕ್ಕೆ (Personality Test) ಆಹ್ವಾನಿಸಲಾಗಿತ್ತು. ಅಂತಿಮ ಹಂತವಾದ ಸಂದರ್ಶನಗಳು ಜನವರಿ 5 ರಿಂದ ಫೆಬ್ರವರಿ 27ರವರೆಗೆ ನಡೆದಿದ್ದು, ಅಭ್ಯರ್ಥಿಗಳ ಜ್ಞಾನ, ವ್ಯಕ್ತಿತ್ವ ಮತ್ತು ಆಡಳಿತ ಸಾಮರ್ಥ್ಯವನ್ನು ಪರಿಶೀಲಿಸಲಾಯಿತು.
ಈಗ ಪ್ರಕಟವಾಗಿರುವ ಅಂತಿಮ ಫಲಿತಾಂಶದ ಪ್ರಕಾರ ಒಟ್ಟು 958 ಅಭ್ಯರ್ಥಿಗಳು ವಿವಿಧ ನಾಗರಿಕ ಸೇವೆಗಳ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಹುದ್ದೆಗಳ ಹಂಚಿಕೆ
180 ಅಭ್ಯರ್ಥಿಗಳು – Indian Administrative Service (IAS)
150 ಅಭ್ಯರ್ಥಿಗಳು – Indian Police Service (IPS)
55 ಅಭ್ಯರ್ಥಿಗಳು – Indian Foreign Service (IFS)
ಇದಲ್ಲದೆ ಇತರ ಕೇಂದ್ರ ಸೇವೆಗಳಿಗೂ ಉಳಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ವರ್ಗವಾರು ಹಂಚಿಕೆ (IAS) ಐಎಎಸ್ ಹುದ್ದೆಗಳ ಹಂಚಿಕೆ ವಿವರ ಹೀಗಿದೆ: ಸಾಮಾನ್ಯ ವರ್ಗ – 74, ಇತರೆ ಹಿಂದುಳಿದ ವರ್ಗ (OBC) – 47, ಪರಿಶಿಷ್ಟ ಜಾತಿ (SC) – 28, ಪರಿಶಿಷ್ಟ ಪಂಗಡ (ST) – 13, ಆರ್ಥಿಕವಾಗಿ ಹಿಂದುಳಿದ ವರ್ಗ (EWS) – 18
ಈ ಫಲಿತಾಂಶದೊಂದಿಗೆ ದೇಶದ ವಿವಿಧ ಭಾಗಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳು ಆಡಳಿತ ಸೇವೆಗೆ ಆಯ್ಕೆಯಾಗಿದ್ದು, ಸಾರ್ವಜನಿಕ ಸೇವೆಯಲ್ಲಿ ತಮ್ಮದೇ ಆದ ಗುರುತು ಮೂಡಿಸುವ ನಿರೀಕ್ಷೆಯಿದೆ.
ಇದೇ ವೇಳೆ, ಆಯ್ಕೆಯಾದ ಅಭ್ಯರ್ಥಿಗಳ ವಿಸ್ತೃತ ಅಂಕಪಟ್ಟಿ (Marks) ಮುಂದಿನ 15 ದಿನಗಳೊಳಗೆ ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ.
UPSC ಫಲಿತಾಂಶ ಮಾಹಿತಿಯನ್ನು ತಿಳಿಯಲು ಅಧಿಕೃತ ಜಾಲತಾಣಕ್ಕೆ (Official Website) ಭೇಟಿ ನೀಡಿ : https://upsc.gov.in/




















