ನವದೆಹಲಿ: ಟೆಲಿಕಾಂ ಗ್ರಾಹಕರಿಗೆ ದೊಡ್ಡ ನೆರವಾಗುವ ನಿರ್ಧಾರವಾಗಿ (TRAI) ಹೊಸ ಕರಡು ನಿಯಮಾವಳಿಯನ್ನು ಬಿಡುಗಡೆ ಮಾಡಿದೆ. “ಟೆಲಿಕಾಂ ಗ್ರಾಹಕ ರಕ್ಷಣೆ (13ನೇ ತಿದ್ದುಪಡಿ) ನಿಯಮಗಳು, 2026” ಅಡಿಯಲ್ಲಿ, ಟೆಲಿಕಾಂ ಕಂಪನಿಗಳು ಡೇಟಾ ಇಲ್ಲದ ಧ್ವನಿ (Voice) ಮತ್ತು SMS ಮಾತ್ರ ಪ್ಯಾಕ್‌ಗಳನ್ನು ಕಡಿಮೆ ಬೆಲೆಯಲ್ಲಿ ನೀಡಬೇಕು ಎಂದು ಪ್ರಸ್ತಾಪಿಸಲಾಗಿದೆ.
ಈ ನಿಯಮಾವಳಿಯ ಮುಖ್ಯ ಉದ್ದೇಶ, ಡೇಟಾ ಸೇವೆಗಳ ಅಗತ್ಯವಿಲ್ಲದ ಗ್ರಾಹಕರಿಗೆ—ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು, ಹಿರಿಯ ನಾಗರಿಕರು ಹಾಗೂ ಫೀಚರ್ ಫೋನ್ ಬಳಕೆದಾರರಿಗೆ—ಕೈಗೆಟುಕುವ ಸೇವೆಗಳನ್ನು ಒದಗಿಸುವುದಾಗಿದೆ.
ಏನು ಬದಲಾವಣೆ? : ಹೊಸ ಕರಡು ಪ್ರಕಾರ ಡೇಟಾ ಇರುವ ಪ್ಯಾಕ್‌ಗಳಿಗೆ ಹೋಲಿಸಿದರೆ, Voice + SMS ಮಾತ್ರ ಪ್ಯಾಕ್‌ಗಳು ಕಡಿಮೆ ದರದಲ್ಲಿ ಇರಬೇಕು ಹಾಗೂ ಎಲ್ಲಾ ಮಾನ್ಯತೆ ಅವಧಿಗಳಲ್ಲೂ (Validity periods) ಈ ಪ್ಯಾಕ್‌ಗಳು ಲಭ್ಯವಾಗಬೇಕು, ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಪ್ಲಾನ್ ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ ಎಂದು ತಿಳಿಸಿದೆ.
ಏಕೆ ಈ ನಿರ್ಧಾರ? : TRAI ಪ್ರಕಾರ, ದೇಶದಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಡೇಟಾ ಬಳಸುವುದಿಲ್ಲ. ಸ್ಮಾರ್ಟ್‌ಫೋನ್ ಬಳಸದ ಅಥವಾ ಡೇಟಾ ಅಗತ್ಯವಿಲ್ಲದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮೊಬೈಲ್ ಸೇವೆ ಒದಗಿಸುವುದು ಮತ್ತು ಅನಗತ್ಯ ಸೇವೆಗಳಿಗಾಗಿ ಹಣ ಪಾವತಿಸುವುದನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ವಿಶೇಷವಾಗಿ ಗ್ರಾಮೀಣ ಬಳಕೆದಾರರು, ಹಿರಿಯ ನಾಗರಿಕರು, ಸರಳ ಫೋನ್ (Feature Phone) ಬಳಕೆದಾರರು ಇವರಿಗೆ ಅನಗತ್ಯವಾಗಿ ಡೇಟಾ ಪ್ಯಾಕ್‌ಗಳಿಗಾಗಿ ಹೆಚ್ಚು ಹಣ ಪಾವತಿಸುವ ಪರಿಸ್ಥಿತಿ ಉಂಟಾಗುತ್ತಿದೆ. ಇದನ್ನು ತಿದ್ದಲು ಈ ಹೊಸ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕ ಅಭಿಪ್ರಾಯ ಆಹ್ವಾನ : ಈ ಕರಡು ನಿಯಮಾವಳಿಯ ಕುರಿತು ಟೆಲಿಕಾಂ ಕಂಪನಿಗಳು, ಗ್ರಾಹಕ ಸಂಘಟನೆಗಳು, ಸಾಮಾನ್ಯ ಜನರು ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಏಪ್ರಿಲ್ 28, 2026ರೊಳಗೆ ಸಲ್ಲಿಸಬಹುದು ಎಂದು TRAI ತಿಳಿಸಿದೆ.





















