ಪಶ್ಚಿಮ ಬಂಗಾಳದಲ್ಲಿ 2026ರ ವಿಧಾನಸಭಾ ಚುನಾವಣೆಯ ಮುನ್ನ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಟಿಎಂಸಿ (ತೃಣಮೂಲ ಕಾಂಗ್ರೆಸ್) ಹಾಗೂ ಪ್ರಮುಖ ವಿರೋಧ ಪಕ್ಷ ಬಿಜೆಪಿಯ ನಡುವೆ ಕಠಿಣ ಪೈಪೋಟಿ ನಿರೀಕ್ಷೆಯಾಗಿದೆ. ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಸುಭೇಂದು ಅಧಿಕಾರಿ ಅವರ ನಾಮಪತ್ರ ಸಲ್ಲಿಕೆಗೆ ಹಾಜರಾಗಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಹತ್ವದ ರಾಜಕೀಯ ಘೋಷಣೆಗಳನ್ನು ಮಾಡಿದ್ದಾರೆ.
ಮುಂದಿನ 15 ದಿನಗಳು ನಾನು ಪಶ್ಚಿಮ ಬಂಗಾಳದಲ್ಲೇ ಉಳಿದು ಮಮತಾಗೆ ಬೈ-ಬೈ ಹೇಳಿಯೇ ಬರ್ತೀನಿ. ಚುನಾವಣಾ ಪ್ರಚಾರ ಮತ್ತು ಸಂಘಟನೆ ಕಾರ್ಯಗಳನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತೇನೆ ಎಂದು ಹೇಳಿದರು. ಅವರು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿ, ಬಹುತೇಕ ಎಲ್ಲ ಕಡೆ ಜನರಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ. ಬಂಗಾಳದ ಜನರು ಟಿಎಂಸಿಯ ಗೂಂಡಾಗಿರಿಯಿಂದ ಸಂಪೂರ್ಣವಾಗಿ ಬೇಸತ್ತಿದ್ದಾರೆ, ಆಗಾಗ ಸ್ಫೋಟಗಳು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುತ್ತದೆ, ಅಭಿವೃದ್ಧಿಯ ಹೊಸ ಅಲೆಯನ್ನು ತರುತ್ತದೆ. ಇದರಿಂದ ಬಂಗಾಳವುತನ್ನ ಹಿಂದಿನ ಗುರುತನ್ನು ಮರಳಿ ಪಡೆಯಬಹುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.
ರಾಜಕೀಯ ವಾತಾವರಣ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿರುವ ಹಿನ್ನೆಲೆ, ಎರಡೂ ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯಗಳನ್ನು ಕೈಗೊಂಡಿವೆ. ಬಿಜೆಪಿಯು ಉದ್ಯೋಗ, ಭದ್ರತೆ ಮತ್ತು ಅಭಿವೃದ್ಧಿ ವಿಚಾರಗಳನ್ನು ಪ್ರಮುಖ ಅಸ್ತ್ರಗಳಾಗಿ ಬಳಸುತ್ತಿದ್ದು, ಟಿಎಂಸಿ ತನ್ನ ಕಲ್ಯಾಣ ಯೋಜನೆಗಳು ಮತ್ತು ರಾಜ್ಯದ ಪ್ರಗತಿಯನ್ನು ಹೈಲೈಟ್ ಮಾಡುತ್ತಿದೆ.
ಮುಂದಿನ ದಿನಗಳಲ್ಲಿ ಪ್ರಮುಖ ನಾಯಕರ ರ್ಯಾಲಿಗಳು, ಸಾರ್ವಜನಿಕ ಸಭೆಗಳು ಮತ್ತು ತಂತ್ರಗಾರಿಕಾ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇದೆ. 2026ರ ಚುನಾವಣೆ ಪಶ್ಚಿಮ ಬಂಗಾಳದ ರಾಜಕೀಯ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಲಿದೆ.



















