ನವದೆಹಲಿ: ಕೆಂಪುಕೋಟೆ ಬಳಿ ನಡೆಸಿದ ಆತ್ಮಾಹುತಿ ದಾಳಿ ಸ್ಫೋಟವನ್ನು ಮೂಲತಃ ಬಾಬ್ರಿ ಮಸೀದಿ ಧ್ವಂಸಗೊಂಡ ದಿನವಾದ ಡಿಸೆಂಬರ್ 6 ರಂದು ನಡೆಸಲು ಉಗ್ರ ಡಾ. ಉಮರ್ ನಬಿ ಸಂಚು ರೂಪಿಸಿದ್ದ ಸಂಗತಿ ಈಗ ಬಯಲಾಗಿದೆ.
ಜೈಷ್ ಎ ಮುಹಮ್ಮದ್ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ 8 `ವೈಟ್ ಕಾಲರ್’ ಉಗ್ರರು ತಮ್ಮೊಳಗೆ ನಡೆಸಿರುವ ಮಾತುಕತೆ ಹಾಗೂ ಕುಟುಂಬ ಸದಸ್ಯರು ಮತ್ತು ಗೆಳೆಯರೊಂದಿಗೆ ಮಾಡಿರುವ ಸಂಭಾಷಣೆಗಳಿಂದ ಈ ಉದ್ದೇಶಿತ ಸಂಚು ಬಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕಾಶ್ಮೀರ, ಹರಿಯಾಣ ಮತ್ತು ಉತ್ತರಪ್ರದೇಶಗಳ ಉಗ್ರ ಜಾಲ ವ್ಯಾಪ್ತಿಯಲ್ಲಿ 28 ವರ್ಷದ ವೈದ್ಯ ಉಮರ್ ಓರ್ವ ಪ್ರಮುಖ ಉಗ್ರನಾಗಿ ಹೊರಹೊಮ್ಮಿದ್ದ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಸೇರಿದ ಈತ ಇದೀಗ ದೆಹಲಿ ಕಾರು ಸ್ಫೋಟದಲ್ಲಿ ಆತ್ಮಾಹುತಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಫರೀದಾಬಾದ್‌ನ ಅಲ್ ಫಲಾಹ್ ವಿ.ವಿ.ಯ ಡಾ. ಮುಝಮಿಲ್ ಅಹ್ಮದ್ ಘನಿ ಅಲಿಯಾಸ್ ಮುಸಾಯಿಬ್ ಬಂಧನವಾಗಿರುವುದರಿಂದ ಡಿ. 6 ರಂದು ಉದ್ದೇಶಿಸಲಾಗಿದ್ದ ದಾಳಿ ಯೋಜನೆ ವಿಫಲವಾಯಿತು. ಬಂಧಿತ ಮುಸಾಯಿಬ್‌ನ ಕೊಠಡಿಯಲ್ಲಿ 360 ಕೆ.ಜಿ. ಅಮೋನಿಯಂ ನೈಟ್ರೇಟ್ ಪತ್ತೆಯಾಗಿದೆ. ಇದರಿಂದ ಹೆದರಿದ್ದ ಉಮರ್ ದೆಹಲಿಯಲ್ಲಿ ಆಕಸ್ಮಿಕವಾಗಿ ಸ್ಫೋಟಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೈಲಂಟಾಗಿದ್ದ ಶಾಹೀನ್ ವೈಲಂಟ್ ಆದಳು: ಈ ಮಧ್ಯೆ ಭಾರತದಾದ್ಯಂತ ಭಯೋತ್ಪಾದಕ ದಾಳಿಗೆ ತಾನೂ ಒಳಗೊಂಡಂತೆ ವೈದ್ಯರ ಗುಂಪು ಸಂಚು ನಡೆಸಿದ್ದಾಗಿ ಅಲ್ ಫಲಾಹ್ ವಿವಿಯ ವೈದ್ಯೆ ಡಾ ಶಾಹೀನ್ ಶಾಹೀದ್ ತನಿಖಾಧಿಕಾರಿಗಳೆದುರು ತಪ್ಪೊಪ್ಪಿಕೊಂದ್ದಾಳೆ. ಈ ಕೃತ್ಯಕ್ಕಾಗಿ ಕಳೆದ ಎರಡು ವರ್ಷಗಳಿಂದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಲಾಗುತಿತ್ತು ಎಂದೂ ಆಕೆ ಜಮ್ಮು-ಕಾಶ್ಮೀರ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ.
ಶಾಹೀನ್ ಶಾಂತ ಸ್ವಭಾವದವಳಾಗಿದ್ದಳು. ಯಾವುದೇ ಧರ್ಮ ಸಿದ್ಧಾಂತ ಕುರಿತು ಚರ್ಚಿಸುತ್ತಿರಲಿಲ್ಲ. ತನ್ನ ವೈದ್ಯಕೀಯ ಅಧ್ಯಯನ ಬಗ್ಗೆ ಮಾತ್ರ ಗಮನಹರಿಸುತ್ತಿದ್ದಳು ಆದರೆ 2015ರಲ್ಲಿ ವಿಚ್ಛೇದನಗೊಂಡ ನಂತರ ಆಕೆ ಭಯೋತ್ಪಾದಕಿಯಾಗಿದ್ದು ಆಶ್ಚರ್ಯವಾಗಿದೆ ಎಂದು ಲಖನೌದ ಕೆಪಿಎಂ ಆಸ್ಪತ್ರೆಯ ನೇತ್ರತಜ್ಞ ಡಾ. ಜಾಫರ್ ಹಯಾತ್ ಹೇಳುತ್ತಾರೆ.
ಅಯೋಧ್ಯೆ, ಕಾಶಿ ಸ್ಫೋಟಕ್ಕೂ ಸಂಚು: ಜೈಶ್ ಇ ಮುಹಮ್ಮದ್ ಗುಂಪು ಬೆಂಬಲಿಸುವ ಉಗ್ರರ ಗುರಿ ದೆಹಲಿಯ ಕೆಂಪುಕೋಟೆಯಾಗಿರಲಿಲ್ಲ. ಸಹಚರರ ಬಂಧನದಿಂದ ಗಲಿಬಿಲಿಗೊಂಡ ಶಂಕಿತ ಉಗ್ರರಿಂದ ದೆಹಲಿ ಸ್ಫೋಟ ನಡೆದಿದೆ. ಉಗ್ರರ ನಿಜವಾದ ಗುರಿ ಅಯೋಧ್ಯೆಯ ರಾಮಮಂದಿರ, ಕಾಶಿ ವಿಶ್ವನಾಥ ದೇವಾಲಯ, ದೆಹಲಿಯ ಸೇನಾಭವನ, ವಾಯುಪಡೆ ಕಚೇರಿ,ಸಂಸತ್ ಭವನ ರಸ್ತೆಯಂತಹ ಪ್ರಮುಖ ಆಯಾಕಟ್ಟಿನ ಸ್ಥಳಗಳ ಮೇಲೆ ದಾಳಿ ಮಾಡಲು ಸಂಚು ನಡೆಸಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ. ಈ ಸಂಬಂಧ 1500ಕ್ಕೂ ಹೆಚ್ಚು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿದ್ದರು. ಆದರೆ ಕಳೆದ 30 ದಿನಗಳಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು.
