ರಾಷ್ಟ್ರೀಯ ಹೆದ್ದಾರಿಗಳಲ್ಲಿ ವನ್ಯಜೀವಿಗಳು ಆಗಾಗ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುವುದು ಅಥವಾ ಗಂಭೀರ ಗಾಯಗೊಳ್ಳುವ ಘಟನೆಗಳು ನಡೆಯುತ್ತಿರುತ್ತವೆ. ಇಂತಹ ಘಟನೆಗಳಿಂದ ವನ್ಯಜೀವಿಗಳನ್ನು ರಕ್ಷಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಒಂದು ನವೀನ ವ್ಯವಸ್ಥೆಯನ್ನು ಪರಿಚಯಿಸಿದೆ.
ವನ್ಯಜೀವಿಗಳು ರಸ್ತೆ ದಾಟುವ ಸ್ಥಳಗಳಲ್ಲಿ ಈಗಾಗಲೇ ವಿಶೇಷ ಫಲಕಗಳನ್ನು ಹಾಕಿದ್ದರೂ, ಅದು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ಅಪಘಾತಗಳು ನಡೆಯುತ್ತಲೇ ಇತ್ತು. ಅದಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಂಪು ಟೇಬಲ್‌ಟಾಪ್‌ಗಳನ್ನು ಸ್ಥಾಪಿಸಲು ಮುಂದಾಗಿದೆ.
ಏನಿದು ಕೆಂಪು ಟೇಬಲ್‌ಟಾಪ್ ರಸ್ತೆ?: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ಈ ಟೇಬಲ್‌ಟಾಪ್‌ಗಳನ್ನು ಸ್ಥಾಪಿಸಲಾಗುತ್ತದೆ. ಈ ಟೇಬಲ್‌ಟಾಪ್‌ಗಳು ಐದು ಮಿಲಿಮೀಟರ್ ದಪ್ಪವಾಗಿರಲಿದ್ದು, ರಸ್ತೆ ಮೇಲ್ಮೈಗಿಂತ ಎತ್ತರದಲ್ಲಿರುತ್ತವೆ. ಮತ್ತು ಚಾಲಕರಿಗೆ ಕಣ್ಣಿಗೆ ಸುಲಭವಾಗಿ ಕಾಣಿಸುತ್ತವೆ. ಅಲ್ಲದೇ ರಸ್ತೆ ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಟೇಬಲ್‌ಟಾಪ್ ಮೇಲೆ ವಾಹನ ಚಲಿಸುವಾಗ ಕಂಪನ ಉಂಟಾಗುತ್ತದೆ. ಇದರಿಂದಾಗಿ ಸ್ವಯಂಚಾಲಿತವಾಗಿ ವಾಹನದ ವೇಗ ಕೂಡ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ವನ್ಯಜೀವಿಗಳು ವಾಹನಕ್ಕೆ ಅಡ್ಡಿ ಬಂದ ಸಂದರ್ಭದಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಪ್ರಾಣಿಗಳಿಗೂ ಕೂಡ ರಸ್ತೆ ದಾಟಲು ಅನುಕೂಲವಾಗಲಿದೆ.
ಜಬಲ್‌ಪುರ-ಭೋಪಾಲ್ ನಿರ್ಮಾಣ: ಜಬಲ್‌ಪುರ-ಭೋಪಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೇಬಲ್‌ಟಾಪ್‌ಗಳನ್ನು ನಿರ್ಮಿಸಲಾಗಿದೆ. ಏಕೆಂದರೆ ಈ ರಸ್ತೆ ವೀರಾಂಗಣ ದುರ್ಗಾವತಿ ವನ್ಯಜೀವಿ ಅಭಯಾರಣ್ಯ ಮತ್ತು ನೌರದೇಹಿ ವನ್ಯಜೀವಿ ಅಭಯಾರಣ್ಯ ಮೂಲಕ ಹಾದುಹೋಗುತ್ತದೆ. ಇಲ್ಲಿ ಜಿಂಕೆ, ನರಿ, ಕಡವೆ, ಹುಲಿಗಳು ಸೇರಿದಂತೆ ಅನೇಕ ಪ್ರಾಣಿಗಳು ಈ ಪ್ರದೇಶದಲ್ಲಿ ಪ್ರಮುಖ ಜನಸಂಖ್ಯೆಯನ್ನು ಹೊಂದಿವೆ. ಈ ಮಾರ್ಗದಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ವನ್ಯಜೀವಿಗಳಿಗೆ ತುಂಬಾ ಅಪಾಯಕಾರಿ ವಲಯ ಎಂದು ಕರೆಯಲ್ಟಿಟ್ಟಿದೆ. ಅದಕ್ಕಾಗಿ ಅಪಘಾತ ತಡೆಯಲು ಮೊದಲ ಹಂತದಲ್ಲಿ ಈ ಮಾರ್ಗದಲ್ಲಿ ಸುಮಾರು 12 ಕಿಲೋಮೀಟರ್‌ಟೇಬಲ್ ಟಾಪ್ ಅಳವಡಿಸಿದೆ.





















