ಪುಣೆ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾದ ಸುರೇಶ್ ಕಲ್ಮಾಡಿ ಅವರು ಮಂಗಳವಾರ ಪುಣೆಯಲ್ಲಿ ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಕುಟುಂಬದ ಮೂಲಗಳ ಪ್ರಕಾರ, ಸುರೇಶ್ ಕಲ್ಮಾಡಿ ಅವರು ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಪುಣೆಯ ಖಾಸಗಿ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಧಾರವಾಡ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ
ಅವರ ಪಾರ್ಥಿವ ಶರೀರವನ್ನು ಪುಣೆಯ ಎರಾಂಡ್‌ವಾನೆ ಪ್ರದೇಶದಲ್ಲಿರುವ ಕಲ್ಮಾಡಿ ಹೌಸ್‌ನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಮಧ್ಯಾಹ್ನ 3.30ಕ್ಕೆ ವೈಕುಂಠ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ಮಂಗಳೂರು ಮೂಲ : ಮಂಗಳೂರು ಮೂಲದ ಡಾ. ಕೆ. ಶಾಮರಾವ್ ಕಲ್ಮಾಡಿ ಮತ್ತು ಶಾಂತಾ ರಾವ್ ಕಲ್ಮಾಡಿ ಅವರ ಮಗನಾಗಿ ಜನಿಸಿದ ಸುರೇಶ್ ಕಲ್ಮಾಡಿ ಅವರು ಬಾಲ್ಯ ಜೀವನವನ್ನು ಪುಣೆಯಲ್ಲಿ ಕಳೆದರು, ಮೇ 1, 1944ರಂದು ಜನಿಸಿದ ಸುರೇಶ್ ಕಲ್ಮಾಡಿ, ರಾಜಕೀಯ ಪ್ರವೇಶಕ್ಕೂ ಮೊದಲು ಆರು ವರ್ಷಕ್ಕೂ ಹೆಚ್ಚು ಕಾಲ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು. ವಾಯುಪಡೆಯಿಂದ ನಿವೃತ್ತರಾದ ಬಳಿಕ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು.
ಇದನ್ನೂ ಓದಿ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ
ಅವರು ಪುಣೆಯಿಂದ ದೀರ್ಘಕಾಲ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಪಿ.ವಿ. ನರಸಿಂಹರಾವ್ ಅವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ವಿಶೇಷವೆಂದರೆ, ರೈಲ್ವೆ ರಾಜ್ಯ ಸಚಿವರಾಗಿದ್ದರೂ ರೈಲ್ವೆ ಬಜೆಟ್ ಮಂಡಿಸಿದ ಏಕೈಕ ಸಚಿವ ಎಂಬ ಗೌರವ ಅವರಿಗೆ ಸಲ್ಲುತ್ತದೆ.
ಕಾಂಗ್ರೆಸ್ ಪಕ್ಷದಲ್ಲಿ ಅವರು ಹೈಕಮಾಂಡ್‌ಗೆ ಹತ್ತಿರದ ನಾಯಕರಾಗಿದ್ದು, ಸಂಘಟನಾ ಮಟ್ಟದಲ್ಲಿಯೂ ಪ್ರಭಾವಶಾಲಿ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದರು. ಜೊತೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ಐದು ವರ್ಷ ನಾನೇ ಸಿಎಂ: ಹೈಕಮಾಂಡ್ ತೀರ್ಮಾನ ಅಂತಿಮ
ವಿವಾದಗಳು: 2010ರ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಸುರೇಶ್ ಕಲ್ಮಾಡಿ ಪ್ರಮುಖ ಆರೋಪಿಯಾಗಿದ್ದರು. ಐಒಎನಲ್ಲಿ ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಪ್ರಶ್ನಿಸಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. 2011ರ ಏಪ್ರಿಲ್‌ನಲ್ಲಿ ಅವರನ್ನು ಬಂಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಅವರನ್ನು ಅಮಾನತುಗೊಳಿಸಿತ್ತು. ಬಳಿಕ ಅವರು ಸಕ್ರಿಯ ರಾಜಕೀಯದಿಂದ ಬಹುತೇಕ ದೂರ ಉಳಿದಿದ್ದರು.
ಸುರೇಶ್ ಕಲ್ಮಾಡಿ ಅವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕ್ರೀಡಾ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.























