ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ನಿವೃತ್ತಿ

0
20

ಮುಂಬೈ: ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ (60) ತಮ್ಮ 36 ವರ್ಷಗಳ ಅದ್ಭುತ ವೃತ್ತಿ ಜೀವನವನ್ನು ಈ ತಿಂಗಳಾಂತ್ಯದಲ್ಲಿ ಕೊನೆಗೊಳಿಸಲಿದ್ದಾರೆ. ರೈಲ್ವೆಯ ಇತಿಹಾಸದಲ್ಲಿ ನೂತನ ಅಧ್ಯಾಯ ಬರೆದ ಸುರೇಖಾ ಅವರು ಅನೇಕ ಅಡೆತಡೆಗಳನ್ನು ಮೀರಿ ಭಾರತೀಯ ರೈಲ್ವೆಯ ಮಹಿಳಾ ಸಬಲೀಕರಣದ ಸಂಕೇತವಾಗಿ ಬೆಳೆದಿದ್ದಾರೆ.

ಮೊದಲ ಮಹಿಳಾ ರೈಲು ಚಾಲಕಿ: ಸೆಪ್ಟೆಂಬರ್ 2, 1965ರಂದು ಜನಿಸಿದ ಸುರೇಖಾ ಅವರು, 1988ರಲ್ಲಿ ಭಾರತೀಯ ರೈಲ್ವೆಯ ಮೊದಲ ಮಹಿಳಾ ರೈಲು ಚಾಲಕಿಯಾಗಿ ನೇಮಕಗೊಂಡರು. ಆಗಿನಿಂದ ಇಂದಿನವರೆಗೂ ಅವರು ನಡೆಸಿದ ಪ್ರಯಾಣವು ಸವಾಲುಗಳನ್ನೂ ಸಾಧನೆಗಳನ್ನೂ ಒಳಗೊಂಡಿದೆ. ಆರಂಭದಲ್ಲಿ ಗೂಡ್ಸ್ ರೈಲುಗಳನ್ನು ಓಡಿಸಿದ ಅವರು ನಂತರ ಮುಂಬೈನ ಐಕಾನಿಕ್ ಸ್ಥಳೀಯ ರೈಲುಗಳು, ಪ್ರಸಿದ್ಧ ಡೆಕ್ಕನ್ ಕ್ವೀನ್ ಎಕ್ಸ್‌ಪ್ರೆಸ್, ಹಾಗೆಯೇ ಭಾರತದ ಆಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಓಡಿಸಿದ ಪ್ರಥಮ ಮಹಿಳೆಯಾಗಿದ್ದಾರೆ.

ದಾಖಲೆ ಪುಸ್ತಕಗಳಲ್ಲಿ ಸುರೇಖಾ :ಸುರೇಖಾ ಅವರ ಹೆಸರು ಹಲವು ದಾಖಲೆ ಪುಸ್ತಕಗಳಲ್ಲಿ ದಾಖಲಾಗಿದ್ದು, ಭಾರತದಲ್ಲಿ ಪ್ರತೀ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ.

ಮಹಿಳಾ ಸಬಲೀಕರಣದ ಸಂಕೇತ: ಮುಂಬೈ ಪ್ರಧಾನ ಕಚೇರಿಯ ಕೇಂದ್ರ ರೈಲ್ವೆ ಸುರೇಖಾ ಅವರ ನಿವೃತ್ತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು “ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ಅವರು 36 ವರ್ಷಗಳ ಸೇವೆಯ ನಂತರ ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದಾರೆ. ನಿಜವಾದ ಹಾದಿ ತೋರಿದ ಅವರು ಅಡೆತಡೆಗಳನ್ನು ಮುರಿದು, ಅಸಂಖ್ಯಾತ ಮಹಿಳೆಯರಿಗೆ ಸ್ಫೂರ್ತಿ ನೀಡಿದ್ದಾರೆ. ಯಾವುದೇ ಕನಸು ಸಾಧಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಅವರ ಸೇವಾ ಪಯಣವು ಶಾಶ್ವತವಾಗಿ ಭಾರತೀಯ ರೈಲ್ವೆಯಲ್ಲಿ ಮಹಿಳಾ ಸಬಲೀಕರಣದ ಸಂಕೇತವಾಗಿ ಉಳಿಯಲಿದೆ” ಎಂದು ಶ್ಲಾಘಿಸಿದೆ.

ಸುರೇಖಾ ಯಾದವ್ ಅವರ ಪಯಣವು ಕೇವಲ ರೈಲ್ವೆಯ ಇತಿಹಾಸದಲ್ಲಷ್ಟೇ ಅಲ್ಲ, ಮಹಿಳೆಯರ ಕನಸುಗಳಿಗೂ ಹೊಸ ದಾರಿಯನ್ನು ತೆರೆದಿದೆ. ಅವರ ಜೀವನವು “ಸಾಧನೆಗೆ ಲಿಂಗ ಅಡ್ಡಿಯಲ್ಲ” ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Previous articleಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಹೊಂದಾಣಿಕೆ: ಶಿಕ್ಷಣ, ಆರೋಗ್ಯಕ್ಕೆ ಕುತ್ತು?
Next articleರೈತರಿಗೆ ವಾರ್ಷಿಕ ₹6000: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

LEAVE A REPLY

Please enter your comment!
Please enter your name here