ರಾಜ್ಯದ ಇತಿಹಾಸದಲ್ಲಿ ಉಪಮುಖ್ಯಮಂತ್ರಿಯ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ
ಮುಂಬೈ: ಮಹಾರಾಷ್ಟ್ರ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುತ್ತಾ, ಸುನೇತ್ರಾ ಪವಾರ್ ಅವರು ಇಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ, ರಾಜ್ಯದ ಇತಿಹಾಸದಲ್ಲಿ ಉಪಮುಖ್ಯಮಂತ್ರಿಯ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಅಪೂರ್ವ ಗೌರವಕ್ಕೆ ಅವರು ಪಾತ್ರರಾದರು.
ಇತ್ತೀಚೆಗೆ ವಿಮಾನ ಅಪಘಾತದಲ್ಲಿ ನಿಧನರಾದ ತಮ್ಮ ಪತಿ ದಿವಂಗತ ಅಜಿತ್ ಪವಾರ್ ಅವರ ಉತ್ತರಾಧಿಕಾರಿಯಾಗಿ ಸುನೇತ್ರಾ ಪವಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ತನಿಖೆಗೆ SIT ರಚನೆ
ಪ್ರಮಾಣ ವಚನಕ್ಕೂ ಮುನ್ನ, ಇಂದು ಮಧ್ಯಾಹ್ನ ಮುಂಬೈನ ವಿಧಾನ ಭವನ ಸಂಕೀರ್ಣದಲ್ಲಿ ನಡೆದ ಎನ್‌ಸಿಪಿಯ ನಿರ್ಣಾಯಕ ಶಾಸಕಾಂಗ ಪಕ್ಷದ ಸಭೆಯಲ್ಲಿ, ಸುನೇತ್ರಾ ಪವಾರ್ ಅವರನ್ನು ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಇದಕ್ಕೂ ಮುನ್ನವೇ ಅವರು ಬೆಳಗ್ಗೆ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ನಡೆದ ಸಭೆಯಲ್ಲಿ ಹಿರಿಯ ನಾಯಕ ದಿಲೀಪ್ ವಾಲ್ಸೆ ಪಾಟೀಲ್ ಅವರು ಸುನೇತ್ರಾ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಅದಕ್ಕೆ ಛಗನ್ ಭುಜಬಲ್ ಅವರು ಅನುಮೋದನೆ ನೀಡಿದರು.
ರಾಜಕೀಯ ವಲಯದಲ್ಲಿ ಅನುಭವ ಹಾಗೂ ಸಂಘಟನಾ ಸಾಮರ್ಥ್ಯಕ್ಕಾಗಿ ಗುರುತಿಸಿಕೊಂಡಿರುವ ಸುನೇತ್ರಾ ಪವಾರ್, ಮಹಾರಾಷ್ಟ್ರದ ಇತಿಹಾಸದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಮಹಿಳೆಯಾಗಿ ದಾಖಲೆ ನಿರ್ಮಿಸಿದ್ದಾರೆ. ಈ ಬೆಳವಣಿಗೆ ಎನ್‌ಸಿಪಿ ಪಕ್ಷಕ್ಕೂ, ರಾಜ್ಯ ರಾಜಕೀಯಕ್ಕೂ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.
ಇದನ್ನೂ ಓದಿ: ತ್ರಿವಳಿ ಕೊಲೆ: ಮನೆಯ ಗುಂಡಿಯಲ್ಲಿ ತಂದೆ–ತಾಯಿ–ತಂಗಿಯ ಶವ ಪತ್ತೆ
1963ರ ಅಕ್ಟೋಬರ್ 18ರಂದು ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯಲ್ಲಿ ಜನಿಸಿದ ಸುನೇತ್ರಾ ಪವಾರ್, ಪ್ರತಿಷ್ಠಿತ ಪದ್ಮಸಿಂಗ್ ಪಾಟೀಲ್ ಕುಟುಂಬದವರು. ಅವರ ತಂದೆ ಪದ್ಮಸಿಂಗ್ ಪಾಟೀಲ್ ಮಾಜಿ ರಾಜ್ಯ ಸಚಿವರು ಹಾಗೂ ಲೋಕಸಭಾ ಸಂಸದರಾಗಿದ್ದರು. ಅವರು ಔರಂಗಾಬಾದ್‌ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆದಿದ್ದು, ಶಿಕ್ಷಣದ ಜೊತೆಗೆ ಸಾಮಾಜಿಕ ಹಾಗೂ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ರಾಜ್ಯದ ಉನ್ನತ ಆಡಳಿತ ಹುದ್ದೆಗೆ ಮಹಿಳೆೊಬ್ಬರು ಏರಿರುವುದು, ಮಹಿಳಾ ರಾಜಕೀಯ ಪ್ರತಿನಿಧಿತ್ವಕ್ಕೆ ಹೊಸ ಉತ್ತೇಜನ ನೀಡಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.





















