ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ

0
3

ಲಾತೂರ್: ದೇಶದ ರಾಜಕೀಯ ಕ್ಷೇತ್ರದಲ್ಲಿ ಮಹತ್ತರ ಸ್ಥಾನ ಹೊಂದಿದ್ದ ಮಾಜಿ ಕೇಂದ್ರ ಗೃಹ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ವಿಠ್ಠಲ್ರಾವ್ ಪಾಟೀಲ್ (90) ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಲಾತೂರಿನಲ್ಲಿ ನಿಧನರಾದರು. ಅಲ್ಪಕಾಲದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ತಮ್ಮ ‘ದೇವ್‌ಘರ್’ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಉನ್ನತ ಹುದ್ದೆಗಳಲ್ಲಿದ್ದ ಪಾಟೀಲ್: ಶಿವರಾಜ್ ಪಾಟೀಲ್ ಅವರು ಹಲವು ದಶಕಗಳ ಸಾರ್ವಜನಿಕ ಬದುಕಿನಲ್ಲಿ ಅತ್ಯುನ್ನತ ಹುದ್ದೆಗಳನ್ನು ವಹಿಸಿದ್ದರು.

2004–2008: ಭಾರತದ ಕೇಂದ್ರ ಗೃಹ ಸಚಿವರು

1991–1996: ಲೋಕಸಭೆಯ ಸ್ಪೀಕರ್

2010–2015: ಪಂಜಾಬ್ ರಾಜ್ಯಪಾಲರು, ಜೊತೆಗೆ ಚಂಡೀಗಢ ಯು.ಟಿ. ಆಡಳಿತಾಧಿಕಾರಿ

ಪಾಟೀಲ್ ಅವರು ಲಾತೂರ್ ಲೋಕಸಭಾ ಕ್ಷೇತ್ರವನ್ನು ಏಳು ಬಾರಿ ಗೆದ್ದಿರುವುದು ಅವರ ಜನಪ್ರೀಯತೆ ಮತ್ತು ಆಡಳಿತ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. 70ರ ದಶಕದಲ್ಲಿ ಪುರಸಭೆಯ ಮುಖ್ಯಸ್ಥರಾಗಿ ರಾಜಕೀಯಕ್ಕೆ ಪ್ರವೇಶಿಸಿದ ಅವರು, ನಂತರ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪಾತ್ರವಹಿಸಿದರು.

ಅಸಾಧಾರಣ ಸಂಸದೀಯ ಪಟು: ಪಾಟೀಲ್ ಅವರು ತಮ್ಮ ಶಿಷ್ಠ ನಡವಳಿಕೆ, ಸ್ಪಷ್ಟವಾದ ವಾಕ್ಚಾತುರ್ಯ, ಆಳವಾದ ಅಧ್ಯಯನ, ಮತ್ತು ಸಾಂವಿಧಾನಿಕ ವಿಷಯಗಳ ಮೇಲಿನ ಹಿಡಿತಕ್ಕಾಗಿ ಪ್ರಸಿದ್ಧರಾಗಿದ್ದರು. ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿನ ಅವರ ಪಾಂಡಿತ್ಯ, ಮತ್ತು ಸಂಸದೀಯ ವ್ಯವಸ್ಥೆಯ ಆಳವಾದ ಅರಿವು ಅವರನ್ನೊಬ್ಬ ಅತ್ಯಂತ ಗೌರವಾನ್ವಿತ ನಾಯಕನನ್ನಾಗಿ ಮಾಡಿತ್ತು.

ಪಕ್ಷದ ನಾಯಕರು ಹೇಳುವಂತೆ, ಅವರು ಸಾರ್ವಜನಿಕ ಭಾಷಣಗಳಲ್ಲಿ ಅಥವಾ ಖಾಸಗಿ ಮಾತುಕತೆಯಲ್ಲಿ ಯಾವಾಗಲೂ ವೈಯಕ್ತಿಕ ಮಟ್ಟದ ವಾಗ್ದಾಳಿ ಮಾಡದ ಸುಗೃಹಸ್ಥ ನಾಯಕ.

ಪಾಟೀಲ್ ಅವರು ಪುತ್ರ ಶೈಲೇಶ್ ಪಾಟೀಲ್, ಸೊಸೆ ಅರ್ಚನಾ (ಬಿಜೆಪಿ ನಾಯಕಿ), ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಲಾತೂರಿನಲ್ಲಿ ಅವರ ನಿಧನದ ಸುದ್ದಿ ತಿಳಿದ ತಕ್ಷಣ ಪಕ್ಷದ ಕಾರ್ಯಕರ್ತರು, ನಾಯಕರು ಮತ್ತು ಸ್ಥಳೀಯ ನಾಗರಿಕರು ತೀವ್ರ ಶೋಕ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಸಂತಾಪ ಸೂಚನೆ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ ಶಿವರಾಜ್ ಪಾಟೀಲ್ ಅವರ ನಿಧನ ದಿಗ್ಭ್ರಮೆ ಉಂಟುಮಾಡಿದೆ. ಅವರು ಅನುಭವಿ ಮತ್ತು ಗೌರವಾನ್ವಿತ ನಾಯಕರು. ಶಾಸಕರು, ಸಂಸದರು, ಕೇಂದ್ರ ಸಚಿವರು, ಸ್ಪೀಕರ್ ಹಾಗೂ ರಾಜ್ಯಪಾಲರಾಗಿ ಸದಾಕಾಲವೂ ಸಮಾಜದ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ದೊರೆಯಲಿ ಎಂದಿದ್ದಾರೆ.

ಶಿವರಾಜ್ ಪಾಟೀಲ್ ಅವರ ನಿಧನದೊಂದಿಗೆ ಭಾರತದ ಸಂಸದೀಯ ರಾಜಕಾರಣವು ಸಂಯಮ, ಶೈಲಿ, ಮತ್ತು ಅಧ್ಯಯನಪೂರ್ಣ ರಾಜಕೀಯದ ಪ್ರತೀಕವಾದ ನಾಯಕನನ್ನು ಕಳೆದುಕೊಂಡಿದೆ.

Previous articleಗುಡ್‌ನ್ಯೂಸ್‌: ಶೀಘ್ರದಲ್ಲಿಯೇ 24,300 ಹುದ್ದೆಗಳ ಭರ್ತಿ