ಮುಂಬೈ: ಶಿವಸೇನೆ (ಉದ್ಧವ್ ಬಾಳಾಸಾಹೇಬ ಠಾಕ್ರೆ) ಪಕ್ಷದ ಪ್ರಮುಖ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿದೆ. ತಮ್ಮ ಆರೋಗ್ಯದ ಕುರಿತು ಅವರು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
“ನಾನು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದೇನೆ. ವೈದ್ಯರ ಸಲಹೆಯಂತೆ, ನಾನು ಜನರೊಂದಿಗೆ ಬೆರೆಯಬಾರದು ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ನೀವು ನೀಡಿರುವ ಪ್ರೀತಿ ಮತ್ತು ನಂಬಿಕೆಯು ನನಗೆ ಶಕ್ತಿ ನೀಡಿದೆ. ಮುಂದಿನ ವರ್ಷ ವೇಳೆಗೆ ನಾನು ಸಂಪೂರ್ಣ ಚೇತರಿಸಿಕೊಳ್ಳುವ ವಿಶ್ವಾಸವಿದೆ” ಎಂದು ಸಂಜಯ್ ರಾವತ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸದಾ ತೀಕ್ಷ್ಣ ನಿಲುವು ಕೈಗೊಳ್ಳುವ ರಾವತ್, ಮಹಾರಾಷ್ಟ್ರದ ವಿರೋಧ ಪಕ್ಷಗಳ ಪ್ರಮುಖ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಪ್ರತಿ ದಿನದ ಮಾಧ್ಯಮ ಸಂವಾದಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ.
ಈ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, “ನಿಮ್ಮ ಶೀಘ್ರ ಚೇತರಿಕೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ಬರೆದು ರಾವತ್ ಅವರಿಗೆ ಶೀಘ್ರ ಗುಣಮುಖವಾಗಲು ಪ್ರಾರ್ಥಿಸಿದ್ದಾರೆ.
ನವೆಂಬರ್ 1 ರಂದು ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನೆಯಲ್ಲಿ ಸಂಜಯ್ ರಾವತ್ ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಅವರ ಆರೋಗ್ಯದ ಹಿನ್ನೆಲೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಾಧ್ಯವಾಗದಂತೆ ತೋರುತ್ತಿದೆ.
 
                

