ದ್ವೇಷ ಭಾಷಣ ಮಸೂದೆ ಜನರ ಬಾಯಿ ಮುಚ್ಚಿಸುವ ಆದೇಶ: ಪ್ರಲ್ಹಾದ ಜೋಶಿ ಕಿಡಿ

0
4

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಅಂಗೀಕರಿಸಿರುವ ‘ದ್ವೇಷ ಭಾಷಣ ಮಸೂದೆ’ ಪ್ರಜಾಪ್ರಭುತ್ವದ ಮೂಲ ಅಡಿಪಾಯಗಳ ಮೇಲೆ ನೇರ ದಾಳಿ ಆಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಸೂದೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನವಾಗಿದ್ದು, ಸಾರ್ವಜನಿಕರ ಬಾಯಿಗೆ ಬೀಗ ಹಾಕುವ ಆದೇಶದಂತಿದೆ ಎಂದು ಅವರು ಕಿಡಿಕಾರಿದ್ದಾರೆ.

ಸಂವಿಧಾನದ 19ನೇ ವಿಧಿಯಲ್ಲಿ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಈ ಮಸೂದೆ ಗಂಭೀರವಾದ ಧಕ್ಕೆ ತರುತ್ತದೆ ಎಂದು ಆರೋಪಿಸಿದ ಜೋಶಿ, “ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜನರ ಧ್ವನಿಯನ್ನು ಸಹಿಸಬೇಕಾದ ಜವಾಬ್ದಾರಿ ಹೊಂದಿರುತ್ತದೆ. ಆದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಟೀಕೆ, ವಿರೋಧ ಮತ್ತು ಜನಪರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಇಂತಹ ಕಾನೂನುಗಳನ್ನು ತರಲು ಮುಂದಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: “5 ವರ್ಷ ನಾನೇ ಬಾಸ್..!” ಕುರ್ಚಿ ಕದನದ ಗೊಂದಲಕ್ಕೆ ಸಿದ್ದರಾಮಯ್ಯ ಫುಲ್ ಸ್ಟಾಪ್

ಈ ಮಸೂದೆ ಬ್ರಿಟಿಷ್ ವಸಾಹತುಶಾಹಿ ಕಾಲದ ಅಸ್ಪಷ್ಟ ವ್ಯಾಖ್ಯಾನಗಳನ್ನು ನೆನಪಿಸುವಂತಿದ್ದು, ಆಡಳಿತಕ್ಕೆ ಅತಿಯಾದ ಅಧಿಕಾರ ನೀಡುವ ಮೂಲಕ ಜನಸಾಮಾನ್ಯರ ಮೇಲೆ ಕಠಿಣ ಕ್ರಿಮಿನಲ್ ಶಿಕ್ಷೆ ಹೇರಲು ದಾರಿ ಮಾಡಿಕೊಡುತ್ತದೆ ಎಂದು ಜೋಶಿ ಆರೋಪಿಸಿದರು. “ಬ್ರಿಟಿಷರು ಜನರ ಹೋರಾಟವನ್ನು ಕುಗ್ಗಿಸಲು ಹೇಗೆ ಕಾನೂನುಗಳನ್ನು ಬಳಸಿಕೊಂಡರೋ, ಅದೇ ರೀತಿಯಲ್ಲಿ ಈಗಿನ ಸರ್ಕಾರವೂ ಭಿನ್ನಮತದ ಧ್ವನಿಯನ್ನು ದಮನ ಮಾಡಲು ಮುಂದಾಗಿದೆ” ಎಂದು ಅವರು ಟೀಕಿಸಿದರು.

ಇಂತಹ ಕಾನೂನುಗಳು ಜಾರಿಗೆ ಬಂದರೆ, ಸರ್ಕಾರದ ವಿರುದ್ಧ ಮಾತನಾಡುವ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಿರೋಧ ಪಕ್ಷದ ನಾಯಕರು ಹಾಗೂ ಸಾಮಾನ್ಯ ನಾಗರಿಕರೂ ಭಯದ ವಾತಾವರಣದಲ್ಲಿ ಬದುಕುವಂತಾಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಅವರು ಎಚ್ಚರಿಸಿದರು.

ಇದನ್ನೂ ಓದಿ: 600 ಬಿಲಿಯನ್‌‌ ಡಾಲರ್ ಸಂಪತ್ತು: ಜಗತ್ತಿಗೆ ಶ್ರೀಮಂತ ಎಲಾನ್ ಮಸ್ಕ್

“ಸಂವಿಧಾನದ ನಿಬಂಧನೆಗಳಿಗೆ ಕಿಂಚಿತ್ತೂ ಗೌರವ ನೀಡದೆ, ಕೇವಲ ರಾಜಕೀಯ ಲಾಭಕ್ಕಾಗಿ ಜನರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇಂತಹ ದಬ್ಬಾಳಿಕೆಯ ನೀತಿಗಳಿಂದಾಗಿ ಪ್ರಜಾಪ್ರಭುತ್ವ ಉಳಿಯುವುದೇ ಅನುಮಾನವಾಗುತ್ತಿದೆ” ಎಂದು ಪ್ರಲ್ಹಾದ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Previous article600 ಬಿಲಿಯನ್‌‌ ಡಾಲರ್ ಸಂಪತ್ತು: ಜಗತ್ತಿಗೆ ಶ್ರೀಮಂತ ಎಲಾನ್ ಮಸ್ಕ್