ಸಂಸತ್ತಿಗೆ ಹೈಡ್ರೋಜನ್ ಕಾರ್‌ನಲ್ಲಿ ಆಗಮನ
ನವದೆಹಲಿ: ಭಾರತದಲ್ಲಿ ಹಸಿರು ಇಂಧನ ಬಳಕೆಯ ನೂತನ ಯುಗಕ್ಕೆ ಮುಖಾಮುಖಿಯಾಗುವ ಮಹತ್ವದ ಘಟನೆ ಬುಧವಾರ ದೆಹಲಿಯಲ್ಲಿ ಜರುಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದೇಶದಲ್ಲೇ ಮೊದಲ ಬಾರಿಗೆ ಹೈಡ್ರೋಜನ್ ಕಾರ್ ಓಡಿಸಿಕೊಂಡು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಆಗಮಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಅಟಲ್ ಅಕ್ಷಯ ಉರ್ಜ ಭವನದಿಂದ ಸಂಸತ್ ಭವನದವರೆಗೆ – ಹಸಿರು ಪ್ರಯಾಣ: ಜೋಶಿ ಅವರು ಅಟಲ್ ಅಕ್ಷಯ ಉರ್ಜ ಭವನದಿಂದ ಹೊರಟು, ಸ್ವತಃ ತಾವು ಕಾರ್ ಅನ್ನು ಚಾಲನೆ ಮಾಡಿ ಸಂಸತ್ ಭವನದವರೆಗೆ ಪ್ರಯಾಣಿಸಿದರು. ಈ ಪ್ರಯೋಗಾತ್ಮಕ ಪ್ರಯಾಣ ಭಾರತೀಯ ಸಾರಿಗೆ ಕ್ಷೇತ್ರದಲ್ಲಿ ಹೈಡ್ರೋಜನ್ ಬಳಕೆಯ ಸಾಮರ್ಥ್ಯವನ್ನು ತೋರಿಸಿದ ಮಹತ್ವದ ಕ್ಷಣವೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಫಲಿತಾಂಶ: ಈ ಕಾರ್ ಅನ್ನು ನವೀಕರಿಸಬಹುದಾದ ಇಂಧನ ಇಲಾಖೆ, ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್, ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (NISE) ಇವುಗಳ ಸಂಯುಕ್ತ ಪ್ರಯತ್ನದಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಪೆಟ್ರೋಲ್-ಡೀಸೆಲ್‌ಗೆ ಪರ್ಯಾಯ: ಹಸಿರು ಇಂಧನ ಹೊಂದಿರುವ ಹೈಡ್ರೋಜನ್ ಕಾರುಗಳ ಮುಖ್ಯ ವೈಶಿಷ್ಟ್ಯಗಳು ಆಕರ್ಷಿಣಿಯವಾಗಿದ್ದು ಪೆಟ್ರೋಲ್ ಅಥವಾ ಡೀಸೆಲ್ ಅಗತ್ಯವಿಲ್ಲ. ಕೇವಲ ಹೈಡ್ರೋಜನ್‌ನಿಂದ ಚಾಲನೆ. ಝಿರೋ ಎಮಿಷನ್, ಝಿರೋ ಪಲ್ಯೂಷನ್.
ಪರಿಸರ ಸ್ನೇಹಿ, ನಿಶಬ್ದ ಸಂಚಾರ. ಭವಿಷ್ಯದ ನಗರ ಸಾರಿಗೆ ವ್ಯವಸ್ಥೆಗೆ ಸೂಕ್ತ ಪರ್ಯಾಯ ಆಗಿದೆ.
ಪರಿಸರ ಮಾಲಿನ್ಯ ವಿರುದ್ಧ ಹೋರಾಡುತ್ತಿರುವ ಭಾರತದಂತಹ ದೇಶಕ್ಕೆ ಇಂತಹ ವಾಹನಗಳು ಬಹುಮುಖ್ಯವಾಗಲಿವೆ ಎಂದು ತಜ್ಞರು ಹೇಳಿದ್ದಾರೆ.
ಸರ್ಕಾರದ ಗುರಿ – ಹಸಿರು ಶಕ್ತಿ ಕ್ರಾಂತಿ: ಪ್ರಹ್ಲಾದ್ ಜೋಶಿ ಅವರು ಹೈಡ್ರೋಜನ್ ಕಾರ್ ಓಡಿಸಿಕೊಂಡು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ “ಈ ಕಾರ್ ಕೇವಲ ವಾಹನ ಅಲ್ಲ, ಇದು ಭಾರತದ ಹಸಿರು ಉರ್ಜಾ ಭವಿಷ್ಯಕ್ಕೆ ಬಲವಾದ ಸಂದೇಶ. ನಾವು ಹೈಡ್ರೋಜನ್ ಶಕ್ತಿಯಲ್ಲಿ ವಿಶ್ವದ ನಾಯಕತ್ವ ಸಾಧಿಸುವ ಗುರಿಗೆ ವೇಗವಾಗಿ ಸಾಗುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.





















