ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಯಶೋಭೂಮಿ ಸಮಾವೇಶ ಕೇಂದ್ರದಲ್ಲಿ ಭಾರೀ ನಿರೀಕ್ಷೆಯಲ್ಲಿದ್ದ ಸೆಮಿಕಾನ್ ಇಂಡಿಯಾ-2025 ಸಮಾವೇಶವನ್ನು ಭವ್ಯವಾಗಿ ಉದ್ಘಾಟಿಸಿದರು. ದೇಶದಲ್ಲಿ Semiconductor ಕ್ಷೇತ್ರದ ಹೂಡಿಕೆ, ಸಂಶೋಧನೆ ಹಾಗೂ ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದ ಈ ಸಮಾವೇಶದಲ್ಲಿ ದೇಶ-ವಿದೇಶದ ತಂತ್ರಜ್ಞಾನ ತಜ್ಞರು, ಉದ್ಯಮಿಗಳು ಹಾಗೂ ಹೂಡಿಕೆದಾರರು ಭಾಗವಹಿಸಿದ್ದಾರೆ.
‘ಚಿಪ್‌ಗಳು ನಮ್ಮ ಡಿಜಿಟಲ್ ವಜ್ರಗಳು’: ಸೆಮಿಕಾನ್ ಇಂಡಿಯಾ-2025 ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಸೆಮಿಕಂಡಕ್ಟರ್‌ಗಳ ಮಹತ್ವವನ್ನು ವಿವರಿಸಿದ್ದಾರೆ. “ಚಿಪ್‌ಗಳು ಇಂದಿನ ಕಾಲದ ಡಿಜಿಟಲ್ ವಜ್ರಗಳು. ಹೇಗೆ ವಜ್ರವು ಶಾಶ್ವತ ಮೌಲ್ಯ ಹೊಂದಿದೆಯೋ ಹಾಗೆ, ಚಿಪ್‌ಗಳು ಭವಿಷ್ಯದ ಆರ್ಥಿಕತೆ, ಭದ್ರತೆ ಹಾಗೂ ನವೀನ ಆವಿಷ್ಕಾರಗಳ ಹೃದಯವಾಗಿದೆ.
ಭಾರತವು ಈ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಜಾಗತಿಕ ನಾಯಕತ್ವ ಸಾಧಿಸುವ ಸಂಕಲ್ಪ ಮಾಡಿಕೊಂಡಿದೆ” ಎಂದು ಹೇಳಿದರು. ಅವರು ಇನ್ನೂ ಮುಂದುವರಿದು, ಭಾರತದ ಯುವಶಕ್ತಿ, ಸಂಶೋಧನಾ ಸಾಮರ್ಥ್ಯ ಹಾಗೂ ಸರ್ಕಾರಿ ಪ್ರೋತ್ಸಾಹದೊಂದಿಗೆ, ಭಾರತವು ವಿಶ್ವದ ಸೆಮಿಕಂಡಕ್ಟರ್ ಹಬ್ ಆಗುವುದು ಅತೀ ದೂರದ ಕನಸು ಅಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಕ್ರಂ-32 ಬಿಟ್ ಪ್ರೊಸೆಸರ್ ಹಸ್ತಾಂತರ: ಈ ಸಂದರ್ಭದಲ್ಲಿ ಕೇಂದ್ರ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಧಾನಿ ಮೋದಿ ಅವರಿಗೆ ಎರಡು ಮಹತ್ವದ ಸಾಧನಗಳನ್ನು ಹಸ್ತಾಂತರಿಸಿದರು ವಿಕ್ರಂ-32 ಬಿಟ್ ಪ್ರೊಸೆಸರ್ ಹಾಗೂ ಟೆಸ್ಟ್ ಚಿಪ್‌ಗಳನ್ನು ತೋರಿಸಿದರು. ವಿಕ್ರಂ-32 ಬಿಟ್ ಪ್ರೊಸೆಸರ್ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿಯಲ್ಲಿ ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮೈಕ್ರೋ ಪ್ರೊಸೆಸರ್ ಆಗಿದೆ.
ಇದನ್ನು ಇಸ್ರೋದ ಸೆಮಿಕಂಡಕ್ಟರ್ ಲ್ಯಾಬೊರೇಟರಿ (SCL)ಯಲ್ಲಿ ತಯಾರಿಸಲಾಗಿದೆ. ಇದು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲೂ ಬಳಸಬಹುದಾದ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ. ಭವಿಷ್ಯದ ರಕ್ಷಣಾ ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ಇದರಿಂದ ಕ್ರಾಂತಿಕಾರಿ ಬದಲಾವಣೆ ಸಂಭವಿಸಲಿದೆ.
ಮೊದಲ ಚಿಪ್ ಪ್ರಧಾನಿಗೆ : ಕೇಂದ್ರ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಧಾನಿ ಮೋದಿ ಅವರಿಗೆ ಎರಡು ಮಹತ್ವದ ಸಾಧನಗಳನ್ನು ಹಸ್ತಾಂತರಿಸಿ ಮಾತನಾಡಿ ಕೆಲವೇ ವರ್ಷಗಳ ಹಿಂದೆ ನಾವು ಪ್ರಧಾನಿ ಅವರ ದೂರದೃಷ್ಟಿ ಪರಿಣಾಮ ಮೊದಲ ಬಾರಿಗೆ ಸೆಮಿಕಂಡಕ್ಟರ್ ಮಿಷನ್ ಅನ್ನು ಆರಂಭಿಸಲಾಯಿತು. ಕೇವಲ ಮೂರೂವರೆ ವರ್ಷಗಳ ಅವಧಿಯಲ್ಲಿ ನಾವು ಇಡೀ ವಿಶ್ವವೇ ಭಾರತದತ್ತ ತಿರುಗು ನೋಡುವಂತಹ ಸಾಧನೆ ಮಾಡಿದ್ದೇವೆ. ಸದ್ಯ 5 ಸೆಮಿ ಕಂಡಕ್ಟರ್ ಘಟಕಗಳ ನಿರ್ಮಾಣ ಕ್ಷಿಪ್ರ ಗತಿಯಲ್ಲಿ ಸಾಗಿದೆ. ಈಗಷ್ಟೇ ನಾವು ಭಾರತದಲ್ಲೇ ತಯಾರಿಸಿದ ಮೊದಲ ಚಿಪ್ ಅನ್ನು ಪ್ರಧಾನಿ ಅವರಿಗೆ ನೀಡಿದ್ದೇವೆ ಎಂದರು.
ದೇಶೀಯ ಉತ್ಪಾದನೆಗೆ ಪ್ರೋತ್ಸಾಹ: ಮೋದಿ ಅವರು ಈ ಸಾಧನವನ್ನು ಸ್ವೀಕರಿಸಿ, ದೇಶೀಯ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ “ಇಂತಹ ಆವಿಷ್ಕಾರಗಳು ನಮ್ಮ ಯುವ ಇಂಜಿನಿಯರ್‌ಗಳ ಸಾಮರ್ಥ್ಯವನ್ನು ತೋರಿಸುತ್ತವೆ. ದೇಶೀಯ ಉತ್ಪಾದನೆ ಮೂಲಕ ನಾವು ಜಾಗತಿಕ ಅವಲಂಬನೆ ಕಡಿಮೆ ಮಾಡುತ್ತೇವೆ. ಈ ಪ್ರೊಸೆಸರ್ ಭಾರತದ ರಕ್ಷಣಾ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ದೊಡ್ಡ ಬಲವಾಗಲಿದೆ ಎಂದರು.