ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ಮೋದಿ ಭಾಗಿ

0
4

ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಸಂದೇಶ ಸಾರಿದ ಕ್ರಿಸ್ಮಸ್: ಪ್ರಧಾನಿ

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿರುವ ಐತಿಹಾಸಿಕ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಸನ್‌ನಲ್ಲಿ ಬೆಳಿಗ್ಗೆ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಈ ಸಂದರ್ಭದಲ್ಲಿ ದೆಹಲಿ ಹಾಗೂ ಉತ್ತರ ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಕ್ರೈಸ್ತ ಭಕ್ತರು ಚರ್ಚ್‌ನಲ್ಲಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು.

ಕ್ರಿಸ್ಮಸ್ ಆಚರಣೆಯ ಅಂಗವಾಗಿ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಗಳು, ಸ್ತುತಿಗೀತೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ವಿಶೇಷ ಪ್ರಾರ್ಥನೆಗಳು ನಡೆದವು. ದೆಹಲಿಯ ಬಿಷಪ್ ಡಾ. ಪೌಲ್ ಸ್ವರೂಪ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಿತು.

‘ಕ್ರಿಸ್ಮಸ್ ಸಮಾಜದಲ್ಲಿ ಸಾಮರಸ್ಯ ಹೆಚ್ಚಿಸಲಿ’: ಪ್ರಾರ್ಥನೆ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಸನ್‌ನಲ್ಲಿ ಬೆಳಿಗ್ಗೆ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದೆ. ಈ ಪ್ರಾರ್ಥನೆ ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಕಾಲಾತೀತ ಸಂದೇಶವನ್ನು ಪ್ರತಿಬಿಂಬಿಸುತ್ತದೆ. ಕ್ರಿಸ್ಮಸ್‌ನ ಚೈತನ್ಯವು ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಯನ್ನು ಪ್ರೇರೇಪಿಸಲಿ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹೊತ್ತಿ ಉರಿದ ಬಸ್, 18 ಮಂದಿ ಸಜೀವ ದಹನ

ಇದಕ್ಕೂ ಮುನ್ನ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ದೇಶದ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ್ದರು.

ಕ್ರೈಸ್ತ ಸಮುದಾಯದ ಕಾರ್ಯಕ್ರಮಗಳಲ್ಲಿ ಪ್ರಧಾನಿ ಸಕ್ರಿಯ: ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಕ್ರೈಸ್ತ ಸಮುದಾಯಕ್ಕೆ ಸಂಬಂಧಿಸಿದ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದಾರೆ.
2023ರಲ್ಲಿ ಈಸ್ಟರ್ ಹಬ್ಬದ ಸಂದರ್ಭದಲ್ಲಿ ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ವರ್ಷ ತಮ್ಮ ನಿವಾಸವಾದ 7ನೇ ಲೋಕ ಕಲ್ಯಾಣ್ ಮಾರ್ಗದಲ್ಲಿ ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಿದ್ದರು.

ಇದನ್ನೂ ಓದಿ: ಅಂಕಣ ಬರಹ: ಸಾಮಾಜಿಕ ಬಹಿಷ್ಕಾರ… ಬಿತ್ತು ಕ್ರಾಂತಿಕಾರಕ ಪ್ರಹಾರ!

2024ರಲ್ಲಿ ಸಚಿವ ಜಾರ್ಜ್ ಕುರಿಯನ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಭೋಜನಕೂಟಕ್ಕೂ ಪ್ರಧಾನಿ ಮೋದಿ ಹಾಜರಾಗಿ ಕ್ರೈಸ್ತ ಸಮುದಾಯದೊಂದಿಗೆ ಸಂವಾದ ನಡೆಸಿದ್ದರು. ಜೊತೆಗೆ, ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನದಲ್ಲೂ ಅವರು ಭಾಗವಹಿಸಿ, ಸಮುದಾಯದೊಂದಿಗೆ ಏಕತೆ ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಾರಿದ್ದರು.

ಪ್ರಧಾನಿಯ ಈ ಭಾಗವಹಿಸುವಿಕೆ ದೇಶದ ಧಾರ್ಮಿಕ ವೈವಿಧ್ಯತೆ, ಸಹಬಾಳ್ವೆ ಹಾಗೂ ಸೌಹಾರ್ದತೆಯ ಪ್ರತೀಕವಾಗಿ ಕಾಣಲಾಗುತ್ತಿದೆ.

Previous articleಹೊತ್ತಿ ಉರಿದ ಬಸ್, 18 ಮಂದಿ ಸಜೀವ ದಹನ