ಭಾರತದ 15ನೇ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಪರಿಚಯ

0
92

ಹೊಸದಿಲ್ಲಿ: ಭಾರತದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ 15 ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲುವು ಸಾಧಿಸಿದ್ದಾರೆ.

68 ವರ್ಷದ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು 452 ಮತಗಳನ್ನು ಪಡೆಯುವ ಮೂಲಕ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ ಅವರನ್ನು ಭಾರೀ ಅಂತರದಿಂದ ಪರಾಭವಗೊಳಿಸಿದರು.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್‌ಡಿಎ)ಯಿಂದ ಕಣಕ್ಕಿಳಿದಿದ್ದ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು ಚಲಾವಣೆಯಾದ 767 ಮತಗಳಲ್ಲಿ 452 ಮತಗಳನ್ನು ಪಡೆದು 152 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ 300 ಮತಗಳನ್ನು ಪಡೆದರೆ 15 ಮತಗಳು ಅಸಿಂಧುವಾಗಿವೆ ಎಂದು ವರದಿಯಾಗಿದೆ.

ತಮಿಳುನಾಡಿನ ತಿರುಪ್ಪುರ್‌ನವರಾದ ರಾಧಾಕೃಷ್ಣನ್ ಅವರು ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೊಯಮತ್ತೂರಿನ ಸಂಸದರಾಗಿ, ಮಹಾರಾಷ್ಟ್ರ, ಜಾರ್ಖಂಡ್ ಗವರ್ನರ್ ಆಗಿದ್ದರು.

ಜೀವನ ಮತ್ತು ಬೆಳವಣಿಗೆ: ಸಿ.ಪಿ. ರಾಧಾಕೃಷ್ಣನ್ ಅವರು 1957 ಅಕ್ಟೋಬರ್ 20ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದರು. ತಂದೆ ಸಿಕೆ ಪೊನ್ನುಸ್ವಾಮಿ, ತಾಯಿ ಕೆ. ಜಾನಕಿ. ಚಿಕ್ಕಂದಿನಿಂದಲೂ ಟೇಬಲ್ ಟೆನ್ನಿಸ್‌ನಲ್ಲಿ ಆಸಕ್ತಿ ಹೊಂದಿದ್ದ ಅವರು, ಕಾಲೇಜಿನಲ್ಲಿ ಟೇಬಲ್ ಟೆನ್ನಿಸ್‌ ಚಾಂಪಿಯನ್ ಆಗಿದ್ದರು.

ತಮಿಳುನಾಡಿನ ತೂತುಕುಡಿಯಲ್ಲಿನ ವಿ.ಒ. ಚಿದಂಬರಂ ಮಹಾವಿದ್ಯಾಲಯದಲ್ಲ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಪದವಿ ಪಡೆದಿರುವ ರಾಧಾಕೃಷ್ಣನ್ ಅವರು, 16ನೇ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್ ಮತ್ತು ಭಾರತೀಯ ಜನ ಸಂಘದೊಂದಿಗೆ ಸಕ್ರಿಯವಾಗಿ ಭಾಗವಹಿಸಲು ಪ್ರಾರಂಭಿಸಿದರು. 1985 ನವೆಂಬರ್ 25ರಂದು ರಾಧಾಕೃಷ್ಣನ್ ಅವರು ಆರ್. ಸುಮತಿ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ರಾಜಕೀಯ ಜೀವನ: ಚಿಕ್ಕ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್ ಮತ್ತು ಭಾರತೀಯ ಜನ ಸಂಘದೊಂದಿಗೆ ಸಕ್ರಿಯವಾಗಿದ್ದ ರಾಧಾಕೃಷ್ಣನ್ ಅವರು 1974 ರಲ್ಲಿ ಭಾರತೀಯ ಜನಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಅಧಿಕೃತ ಪ್ರವೇಶ ಮಾಡಿದರು.

1996 ರಲ್ಲಿ ರಾಧಾಕೃಷ್ಣನ್ ಅವರನ್ನು ತಮಿಳುನಾಡಿನ ಬಿಜೆಪಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು. 1998ರಲ್ಲಿ ಕೊಯಮತ್ತೂರಿನಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. 1999 ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಲೋಕಸಭೆಗೆ ಮರು ಆಯ್ಕೆಯಾದರು.

ಸಂಸದರಾಗಿದ್ದ ಅವಧಿಯಲ್ಲಿ, ಅವರು ಜವಳಿ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಸಂಸದೀಯ ಸಮಿತಿ ಮತ್ತು ಹಣಕಾಸು ಸಲಹಾ ಸಮಿತಿಯ ಸದಸ್ಯರಾಗಿದ್ದರು. ಅವರು ಷೇರು ವಿನಿಮಯ ಹಗರಣದ ತನಿಖೆ ನಡೆಸುವ ಸಂಸದೀಯ ವಿಶೇಷ ಸಮಿತಿಯ ಸದಸ್ಯರಾಗಿದ್ದರು.

2004 ರಲ್ಲಿ ರಾಧಾಕೃಷ್ಣನ್ ಅವರು ಸಂಸದೀಯ ನಿಯೋಗದ ಭಾಗವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ತೈವಾನ್‌ಗೆ ಹೋದ ಮೊದಲ ಸಂಸದೀಯ ನಿಯೋಗದ ಸದಸ್ಯರೂ ಆಗಿದ್ದರು.

2004 ಮತ್ತು 2007ರ ನಡುವೆ, ರಾಧಾಕೃಷ್ಣನ್ ಅವರು ತಮಿಳುನಾಡಿನಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ವೇಳೆ ಪಕ್ಷ ಸಂಘಟಿಸುವುದಕ್ಕಾಗಿ ಅವರು 93 ದಿನಗಳ ಕಾಲ ನಡೆದ 19,000 ಕಿ.ಮೀ ‘ರಥ ಯಾತ್ರೆ’ಯನ್ನು ಕೈಗೊಂಡರು. ಈ ರಥಯಾತ್ರೆ ರಾಜ್ಯದಲ್ಲಷ್ಟೇ ಅಲ್ಲ, ದೇಶದ ಗಮನವನ್ನೂ ಸೆಳೆಯಿತು.

2016 ರಲ್ಲಿ ರಾಧಾಕೃಷ್ಣನ್ ಅವರನ್ನು ಕೊಚ್ಚಿಯ ತೆಂಗಿನ ನಾರು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು, ನಾಲ್ಕು ವರ್ಷಗಳ ಕಾಲ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಅವರ ನಾಯಕತ್ವದಲ್ಲಿ, ಭಾರತದಿಂದ ತೆಂಗಿನ ನಾರು ರಫ್ತು ಸಾರ್ವಕಾಲಿಕ ಗರಿಷ್ಠ ರೂ. 2532 ಕೋಟಿಗಳನ್ನು ತಲುಪಿತು. 2020 ರಿಂದ 2022 ರವರೆಗೆ, ಅವರು ಕೇರಳದ ಬಿಜೆಪಿಯ ಅಖಿಲ ಭಾರತ ಉಸ್ತುವಾರಿಯಾಗಿದ್ದರು.

2023 ಫೆಬ್ರವರಿ 18 ರಂದು ರಾಧಾಕೃಷ್ಣನ್ ಅವರನ್ನು ಜಾರ್ಖಂಡ್ ರಾಜ್ಯಪಾಲರಾಗಿ ನೇಮಿಸಲಾಯಿತು. ತಮ್ಮ ಮೊದಲ ನಾಲ್ಕು ತಿಂಗಳಲ್ಲಿ, ಅವರು ಜಾರ್ಖಂಡ್‌ನ ಎಲ್ಲಾ 24 ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದರು, ನಾಗರಿಕರು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

2025 ಸೆಪ್ಟಂಬರ್‌ 9ರಂದು ನಡೆದ ಚುನಾವಣೆಯಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಆಯ್ಕೆಯಾಗಿದ್ದು, ಅವರು ದಕ್ಷಿಣ ಭಾರತದಿಂದ ಉಪರಾಷ್ಟ್ರಪತಿ ಹುದ್ದೆಗೆ ಏರಿದ ಮೊದಲ ಹಿಂದುಳಿದ ವರ್ಗದ ವ್ಯಕ್ತಿಯಾಗಿದ್ದಾರೆ.

Previous articleಅಕ್ರಮ ಹಣ ವರ್ಗಾವಣೆ: ಶಾಸಕ ಸತೀಶ್ ಸೈಲ್ ಮತ್ತೆ ಇಡಿ ವಶಕ್ಕೆ

LEAVE A REPLY

Please enter your comment!
Please enter your name here