ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ನಡೆಯುತ್ತಿರುವ ಚರ್ಚೆಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡದ್ದಷ್ಟೇ ಅಲ್ಲದೆ, ನೆಹರು ಹಾಗೂ ಇಂದಿರಾ ಗಾಂಧಿ ಕೂಡ ವೋಟ್ ಚೋರಿ ಮಾಡಿದ್ದರು ಎಂಬ ಗಂಭೀರ ಆರೋಪ ಮಾಡಿದರು.
ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಹಿರಿಯ ನಾಯ ಕರ ಗೆಲುವನ್ನೇ ಗುರಿಯಾಗಿಸಿಕೊಂಡು ನಡೆದ ಮತಗಳವಿನ ಬಗ್ಗೆ ವಿವರಿಸಿದ ಶಾ, ದೇಶದಲ್ಲಿ ಮೊದಲ ಬಾರಿಗೆ ಮತ ಕಳ್ಳತನ ನಡೆದಿದ್ದು ದೇಶದ ಮೊದಲ ಪ್ರಧಾನಿಯ ಆಯ್ಕೆಯ ಸಮಯದಲ್ಲಿ ಎಂದು ಹೇಳಿದರು.
ಸ್ವಾತಂತ್ರ್ಯಾನಂತರ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಪ್ರಾಂತ್ಯಗಳ ಕಾಂಗ್ರೆಸ್ ಅಧ್ಯಕ್ಷರುಗಳು ಪ್ರಧಾನಿಯನ್ನು ಆಯ್ಕೆ ಮಾಡಬೇಕಾದ ಸಂದರ್ಭ ಒದಗಿಬಂತು ಮತ್ತು ಮತದಾನವೂ ಆಯಿತು. ಈ ಪೈಕಿ 28 ಮತಗಳು ಸರ್ದಾರ್ ಪಟೇಲರು ಪಡೆದುಕೊಂಡರೆ, ನೆಹರು ಅವರಿಗೆ ಬಂದಿದ್ದು ಕೇವಲ 2 ಮತಗಳು ಮಾತ್ರ. ಆದರೆ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಲಾಯಿತು. ದೇಶದಲ್ಲಿ ನಡೆದ ಮೊದಲ ವೋಟ್ ಚೋರಿ ಇದೇ ಎಂದು ಅಮಿತ್ ಶಾ ಹೇಳಿದರು.
ದೇಶದಲ್ಲಿ 2ನೇ ಸಲ ಮತಗಳವು ಆಗಿದ್ದು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ. ನ್ಯಾಯಾಲಯವು ಅವರ ರಾಯ್‌ಬರೇಲಿ ಚುನಾವಣೆ ಫಲಿತಾಂಶ ಅಮಾನ್ಯ ಮಾಡಿತ್ತು. ಆ ನಂತರವೂ ಇಂದಿರಾ ಗಾಂಧಿ ತಮ್ಮಷ್ಟಕ್ಕೆ ತಾವೇ ಆ ಆದೇಶದಿಂದ ವಿನಾಯಿತಿಯನ್ನು ಕೊಟ್ಟು ಅಧಿಕಾರದಲ್ಲಿ ಮುಂದುವರಿದರು. ಇದು ಕೂಡ ವೋಟ್ ಚೋರಿಯೇ ಎಂದರು.






















