ನ್ಯಾಯಾಂಗ ಕುರಿತು ಅಧ್ಯಾಯ ವಿವಾದ: ಸುಪ್ರೀಂ ಕೋರ್ಟ್ ಟೀಕೆ ಬಳಿಕ NCERT ಕ್ಷಮೆಯಾಚನೆ, ಪಠ್ಯಪುಸ್ತಕ ಹಿಂತೆಗೆತ
ನವದೆಹಲಿ: 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದಿತ ಅಧ್ಯಾಯಕ್ಕೆ ಸಂಬಂಧಿಸಿದಂತೆ National Council of Educational Research and Training (NCERT) ಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚನೆ ಪ್ರಕಟಿಸಿ, ಆ ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿದೆ.
ಮಾರ್ಚ್ 10, 2026 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “Exploring Society: India and Beyond – Grade 8 (Part-II)” ಎಂಬ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ “The Role of Judiciary in our Society” ಎಂಬ ಅಧ್ಯಾಯದ ಬಗ್ಗೆ ಕ್ಷಮೆ ಯಾಚಿಸಲಾಗಿದೆ. ಈ ಅಧ್ಯಾಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತು ವಿವಾದಾತ್ಮಕ ಉಲ್ಲೇಖಗಳಿರುವುದರಿಂದ ದೇಶಾದ್ಯಂತ ವಿವಾದ ಉಂಟಾಗಿತ್ತು.
ಸುಪ್ರೀಂ ಕೋರ್ಟ್ ಕಠಿಣ ನಿಲುವು: ಈ ವಿಚಾರ ಸುಪ್ರೀಂ ಕೋರ್ಟ್ ಗಮನಕ್ಕೆ ಬಂದ ಬಳಿಕ, ನ್ಯಾಯಾಲಯವು ವಿಷಯವನ್ನು ಗಂಭೀರವಾಗಿ ಪರಿಗಣಿಸಿತು. ನ್ಯಾಯಮೂರ್ತಿ ಸೂರ್ಯ ಕಾಂತ್ ಈ ವಿಷಯವನ್ನು “ಅತೀ ಗಂಭೀರ” ಎಂದು ಹೇಳಿ NCERTನ ಆರಂಭಿಕ ಸ್ಪಷ್ಟನೆ ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ನ್ಯಾಯಾಲಯದ ಕಠಿಣ ಟೀಕೆಯ ನಂತರ, ವಿವಾದಿತ ಪಠ್ಯಪುಸ್ತಕವನ್ನು ದೇಶದಾದ್ಯಂತ ಹಿಂತೆಗೆದುಕೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಆ ಪುಸ್ತಕದ ಲಭ್ಯತೆಯನ್ನು ತಕ್ಷಣ ನಿಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.
ಸಾರ್ವಜನಿಕ ಕ್ಷಮೆಯಾಚನೆ : NCERT ನಿರ್ದೇಶಕರು ಮತ್ತು ಸದಸ್ಯರು ಪ್ರಕಟಿಸಿದ ಹೇಳಿಕೆಯಲ್ಲಿ, ವಿವಾದಿತ ಅಧ್ಯಾಯದ ವಿಷಯದ ಬಗ್ಗೆ ಬೇಷರತ್ತಾದ ಮತ್ತು ಯಾವುದೇ ಶರತ್ತುಗಳಿಲ್ಲದ ಕ್ಷಮೆಯಾಚನೆ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ, ಪುಸ್ತಕದ ಸಂಪೂರ್ಣ ಸಂಪುಟವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.






















