ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಉಂಟಾದ ಜಾಗತಿಕ ಬಿಕ್ಕಟ್ಟು ತಾತ್ಕಾಲಿಕವಾಗಿದ್ದು, ಭಾರತ ಅದನ್ನು ಯಶಸ್ವಿಯಾಗಿ ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆಯಲ್ಲಿ ಇಂದು (ಮಾ.23) ಮಾತನಾಡಿದ ಅವರು, ಭಾರತದ ದೃಢ ನಿಲುವು, ಜನರ ಸುರಕ್ಷತೆ ಹಾಗೂ ಆರ್ಥಿಕ ಸ್ಥಿರತೆಗೆ ಕೈಗೊಂಡ ಕ್ರಮಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡ ಬಳಿಕ ಅಲ್ಲಿನ ಭಾರತೀಯರ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ ಪ್ರಧಾನಿ, ಇರಾನ್‌ನಲ್ಲಿ ಸಿಲುಕಿಕೊಂಡಿದ್ದ ಸುಮಾರು 1,000 ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ತಿಳಿಸಿದರು. ಉಳಿದವರನ್ನೂ ಶೀಘ್ರದಲ್ಲಿ ವಾಪಸು ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇರಾನ್‌ನಿಂದ ಈಗಾಗಲೇ 1,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ವಾಪಸ್ಸು ಭಾರತಕ್ಕೆ ಕರೆತರಲಾಗಿದೆ, ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದ ಭಾರತೀಯ ಹಡಗುಗಳು ರಾಜತಾಂತ್ರಿಕ ಮಾತುಕತೆಯಿಂದ ಬಿಡುಗಡೆ ಮಾಡಲಾಗಿದ್ದು, ಇಂಧನ ಆಮದು 27 ದೇಶಗಳಿಂದ 41 ದೇಶಗಳಿಗೆ ವಿಸ್ತರಣೆ ಆಗಿದೆ. ದೇಶದಲ್ಲಿ 53 ಲಕ್ಷ ಮೆಟ್ರಿಕ್ ಟನ್ ತೈಲ ಸಂಗ್ರಹ ದಾಸ್ತಾನು ಲಭ್ಯವಿದೆ. ರೈಲ್ವೆ ವಿದ್ಯುದೀಕರಣ ಮತ್ತು ಎಥೆನಾಲ್ ಮಿಶ್ರಣದಿಂದ ಇಂಧನ ಉಳಿವು ಹೆಚ್ಚಳವಾಗಿದೆ.
ಭಾರತದ ನಿಲುವು ಸ್ಪಷ್ಟ : ಪ್ರಧಾನಿ ಮೋದಿ ಅವರು, “ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಸಂಘರ್ಷವನ್ನು ತಕ್ಷಣ ನಿಲ್ಲಿಸಿ ರಾಜತಾಂತ್ರಿಕ ಮಾತುಕತೆಗಳ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು” ಎಂದು ಜಾಗತಿಕ ವೇದಿಕೆಯಲ್ಲಿ ಭಾರತದ ನಿಲುವನ್ನು ಪುನರುಚ್ಚರಿಸಿದರು. ಅವರು ಪಶ್ಚಿಮ ಏಷ್ಯಾದ ಹಲವು ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ವೈಯಕ್ತಿಕವಾಗಿ ದೂರವಾಣಿ ಮೂಲಕ ಮಾತನಾಡಿದ್ದು, ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಬಿಕ್ಕಟ್ಟಿನ ಪರಿಣಾಮ & ಭಾರತದ ಸಿದ್ಧತೆ – ಇಂಧನ ಭದ್ರತೆ: ಮಧ್ಯಪ್ರಾಚ್ಯ ಪ್ರದೇಶವು ಭಾರತದ ತೈಲ ಮತ್ತು ಅನಿಲ ಅಗತ್ಯಗಳ ಪ್ರಮುಖ ಮೂಲವಾಗಿದ್ದು, ಸರ್ಕಾರ ಪರ್ಯಾಯ ಆಮದು ಮಾರ್ಗಗಳನ್ನು ವಿಸ್ತರಿಸಿದೆ. ಆಹಾರ & ರಸಗೊಬ್ಬರ: ರೈತರಿಗೆ ಖರೀಫ್ ಋತುವಿನಲ್ಲಿ ರಸಗೊಬ್ಬರ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಉತ್ಪಾದನೆ: ದೇಶದಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಇದ್ದು, ವಿದ್ಯುತ್ ಕೊರತೆ ಎದುರಾಗುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಆರ್ಥಿಕ & ವ್ಯಾಪಾರ: ಜಾಗತಿಕ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬಿದ್ದರೂ, ಭಾರತ ತನ್ನ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಸಿದ್ಧವಾಗಿದೆ.
ಏಕೀಕೃತ ಧ್ವನಿಗೆ ಕರೆ : ಈ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನರು ಒಂದೇ ಧ್ವನಿಯಲ್ಲಿ ನಿಲ್ಲಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದರು. “ಇದು ಕೇವಲ ಆರ್ಥಿಕ ಅಥವಾ ಭದ್ರತಾ ಸವಾಲಲ್ಲ, ಮಾನವೀಯ ದೃಷ್ಟಿಕೋನವೂ ಆಗಿದೆ” ಎಂದು ಅವರು ಹೇಳಿದರು.




















