Home Advertisement
Home ಸುದ್ದಿ ದೇಶ ಬೇಕಂತಲೇ ರಾಷ್ಟ್ರಪತಿ ಕಡೆಗಣಿಸಿದ ಮಮತಾ ಸರ್ಕಾರ

ಬೇಕಂತಲೇ ರಾಷ್ಟ್ರಪತಿ ಕಡೆಗಣಿಸಿದ ಮಮತಾ ಸರ್ಕಾರ

0
24

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಬೇಕಂತಲೇ ರಾಷ್ಟ್ರಪತಿಗಳ ಸಮಾರಂಭವನ್ನು ಕಡೆಗಣಿಸಿದೆ ಮತ್ತು ಅವರನ್ನು ಸ್ವಾಗತಿಸದೆ ಅಗೌರವ ತೋರಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಶನಿವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಸಚಿವರು, ಮಮತಾ ಬ್ಯಾನರ್ಜಿ ನಡೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾರ್ವಜನಿಕವಾಗಿಯೇ ತೀವ್ರ ಬೇಸರ ಹೊರ ಹಾಕಿದ್ದಾರೆ. ರಾಷ್ಟ್ರಪತಿಗಳು ಒಂದು ರಾಜ್ಯ ಸರ್ಕಾರದ ಮೇಲೆ ಬಹಿರಂಗ ಬೇಸರ ವ್ಯಕ್ತಪಡಿಸಿದ ಅಪರೂಪದ ಪ್ರಸಂಗಕ್ಕೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ ಎಂದು ಪ್ರತಿಕ್ರಿಯಿಸಿದರು.

ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂತಾಲ್ (ಆದಿವಾಸಿ) ಸಮುದಾಯದ ಅಂತರಾಷ್ಟ್ರೀಯ ಸಮ್ಮೇಳನವನ್ನು ಮಮತಾ ಬ್ಯಾನರ್ಜಿ ಸರ್ಕಾರ ಅವಗಣಿಸಿದ ರೀತಿ ನಡೆದುಕೊಂಡಿದೆ. ಸಮ್ಮೇಳನವನ್ನು ದೊಡ್ಡ ಮೈದಾನದಲ್ಲಿ ನಡೆಸಲು ಯೋಜಿಸಲಾಗಿತ್ತಾದರೂ ಕೊನೆ ಗಳಿಗೆಯಲ್ಲಿ ರಾಜ್ಯಾಡಳಿತ ಅದನ್ನು ಒಂದು ಚಿಕ್ಕ ಸ್ಥಳಕ್ಕೆ ಬದಲಾಯಿಸಿದ್ದು, ಮಾತ್ರವಲ್ಲದೆ, ಸಮ್ಮೇಳನಕ್ಕೆ ಬಂದ ಗೌರವಾನ್ವಿತ ರಾಷ್ಟ್ರಪತಿ ಅವರ ಸ್ವಾಗತಕ್ಕೂ ಸರ್ಕಾರದ ಯಾರೊಬ್ಬ ಪ್ರಮುಖರೊಬ್ಬರೂ ಬರದೇ ಅಗೌರವ ತೋರಿದೆ ಎಂದು ಜೋಶಿ ಆರೋಪಿಸಿದರು.

ರಾಷ್ಟ್ರಪತಿ ಬಹಿರಂಗವಾಗಿಯೇ ಅಸಮಾಧಾನ: ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ರಾಷ್ಟ್ರಪತಿ ಮುರ್ಮು ಅವರು ಸಮ್ಮೇಳನದಲ್ಲಿ ತಮ್ಮ ಭಾಷಣದಲ್ಲಿ ಬಹಿರಂಗವಾಗಿಯೇ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಷ್ಟೊಂದು ದೊಡ್ಡ ಸಭೆಗೆ ಈ ಚಿಕ್ಕ ಸ್ಥಳವನ್ನೇಕೆ ಆಯ್ಕೆ ಮಾಡಲಾಗಿದೆ? ಮತ್ತು ತಮ್ಮ ಭೇಟಿ ವೇಳೆ ಮುಖ್ಯಮಂತ್ರಿ ಅಥವಾ ಯಾವುದೇ ಸಚಿವರು ಸಹ ಸ್ವಾಗತಕ್ಕೆ ಬರಲಿಲ್ಲವಲ್ಲ! ಎಂದು ಅಚ್ಚರಿ ಜತೆಗೆ ಅತೃಪ್ತಿ ಸಹ ವ್ಯಕ್ತಪಡಿಸಿದ್ದಾರೆ ಎಂದರು ಜೋಶಿ.

“ರಾಷ್ಟ್ರಪತಿಗಳ ಕಾರ್ಯಕ್ರಮದ ಬಗ್ಗೆ ಸರ್ಕಾರಕ್ಕೆ ಅಧಿಕೃತ ಮಾಹಿತಿಯೇ ಇರಲಿಲ್ಲ ಎಂದಿದ್ದಾರೆ ಅಲ್ಲಿನ ಸಿಎಂ. ಹಾಗಾದರೆ ಸ್ಥಳ ಬದಲಾವಣೆ ಮಾಡಿದ್ದು ಹೇಗೆ? ಪ್ರಶ್ನಿಸಿದ್ದಾರೆ ಪ್ರಲ್ಹಾದ ಜೋಶಿ.

ಇದನ್ನು ರಾಜಕೀಯಗೊಳಿಸಬಾರದು ಮತ್ತು ಬಿಜೆಪಿ ತನ್ನ ಲಾಭಕ್ಕೆ ರಾಷ್ಟ್ರಪತಿ ಅವರನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪ ಮಮತಾ ಬ್ಯಾನರ್ಜಿ. ಆದರೆ, ವಾಸ್ತವದಲ್ಲಿ ಅದನ್ನು ಮಾಡುತ್ತಿರುವುದೇ ಮಮತಾ ಬ್ಯಾನರ್ಜಿ ಎಂದು ಜೋಶಿ ತಿರುಗೇಟು ನೀಡಿದರು.

ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಸಂವಿಧಾನಿಕ ರಾಷ್ಟ್ರಪತಿ ಹುದ್ದೆಗೆ ಗೌರವ ನೀಡಿಲ್ಲ ಎಂದು ಹರಿಹಾಯ್ದ ಜೋಶಿ, ರಾಷ್ಟ್ರಪತಿಗಳು ಸಾರ್ವಜನಿಕವಾಗಿ ಒಂದು ರಾಜ್ಯ ಸರ್ಕಾರದ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ ಅಪರೂಪದ ಘಟನೆಗೆ ಪಶ್ಚಿಮ ಬಂಗಾಳ ಇದೀಗ ತುತ್ತಾಗಿದ್ದಂತೂ ಸ್ಪಷ್ಟ ಎಂದು ಹೇಳಿದರು.

ಕೇಂದ್ರದ ಯೋಜನೆಗೆ ಟಿಎಂಸಿ ಸರ್ಕಾರದ ಅಸಹಕಾರ: ಟಿಎಂಸಿ ಸರ್ಕಾರದ ಅಸಹಕಾರದಿಂದಾಗಿ ಪಶ್ಚಿಮ ಬಂಗಾಳದಲ್ಲಿ PM ಸೂರ್ಯಘರ್ ಮತ್ತು PM ಕುಸುಮ್ ಯೋಜನೆಗಳ ಪ್ರಗತಿ ಅತ್ಯಂತ ಸೀಮಿತ ಮಟ್ಟದಲ್ಲಿದೆ. ದೇಶದಾದ್ಯಂತ ಲಕ್ಷಾಂತರ ಮನೆಗಳು PM ಸೂರ್ಯಘರ್ ಮತ್ತು ರೈತರು PM ಕುಸುಮ್ ಯೋಜನೆ ಲಾಭ ಪಡೆಯುತ್ತಿದ್ದಾರೆ. ಆದರೆ, ಇಲ್ಲಿ ಈ ಸರ್ಕಾರದ ನಿರ್ಲಕ್ಷ್ಯ ತೀವ್ರವಾಗಿದೆ ಎಂದು ಆರೋಪಿಸಿದರು ಜೋಶಿ.

ಟಿಎಂಸಿ ಸರ್ಕಾರ ಕೇಂದ್ರ ಸರ್ಕಾರದ ಹಲವಾರು ಪರಿವರ್ತನಾ ಯೋಜನೆಗಳನ್ನು ತಡೆಹಿಡಿಯುವುದು ಮತ್ತು ಸರಿಯಾಗಿ ಜಾರಿಗೆ ತರದಿರುವುದರಿಂದ ಬಂಗಾಳ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿದೆ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದ ಜನರು ಪಾರದರ್ಶಕ ಆಡಳಿತ, ನಿಜವಾದ ಅವಕಾಶಗಳು ಮತ್ತು ಅಭಿವೃದ್ಧಿಗೆ ಅರ್ಹರಾಗಿದ್ದಾರೆ. ಪಶ್ಚಿಮ ಬಂಗಾಳ ಅಪಾರ ಸಾಮರ್ಥ್ಯ ಹೊಂದಿರುವ ರಾಜ್ಯವಾಗಿದ್ದು, ಸಮೃದ್ಧ ಸಾಂಸ್ಕೃತಿಕ ಪರಂಪರೆ ಹಾಗೂ ಪ್ರತಿಭಾವಂತ ಜನರನ್ನು ಹೊಂದಿದೆ. ಇವರಿಗೆ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಅತ್ಯುತ್ತಮ ಅವಕಾಶ ದೊರಕಬೇಕಿದೆ ಎಂದು ಹೇಳಿದರು.

2026ರ ವಿಧಾನಸಭೆ ಚುನಾವಣೆ ಜನರಿಗಾಗಿ ಕೆಲಸ ಮಾಡುವ ಸರ್ಕಾರವನ್ನು ಆಯ್ಕೆ ಮಾಡುವ ಮಹತ್ವದ ಅವಕಾಶವಾಗಲಿದೆ. ಬಂಗಾಳದ ಯುವಕರ ಶಕ್ತಿ ಮತ್ತು ಆಶಯಗಳು ರಾಜ್ಯವನ್ನು ಮುಂದೆ ಕೊಂಡೊಯ್ಯಬಲ್ಲದು. ಸೋನಾರ್ ಬಾಂಗ್ಲಾ ನಿರ್ಮಾಣ ಹಾಗೂ ವಿಕಸಿತ ಭಾರತ ದೃಷ್ಟಿಯನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.