ನವದೆಹಲಿ: ಗ್ರಾಹಕರು ಲಭ್ಯವಿರುವಲ್ಲಿ ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್ಜಿ) ಸಂಪರ್ಕಕ್ಕೆ ಬದಲಾಯಿಸಿಕೊಳ್ಳುವಲ್ಲಿ ವಿಫಲವಾದರೆ ಎಲ್ಪಿಜಿ ಅಡುಗೆ ಅನಿಲ ಸಂಪರ್ಕ ಕಡಿತ ಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯಿಂದಾಗಿ ದೇಶವು ಎಲ್ಪಿಜಿ ಕೊರತೆ ಎದುರಿಸುತ್ತಿದೆ. ಇದರಿಂದ ನಾಗರಿಕರು ಹಾಗೂ ಹೋಟೆಲ್ ವ್ಯವಹಾರಸ್ಥರಿಗೆ ಎಲ್ಪಿಜಿ ಪೂರೈಸಲು ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಪಿಎನ್ಜಿ ಸಂಪರ್ಕ ಪಡೆದುಕೊಳ್ಳುವಂತೆ ನೋಟಿಫಿಕೇಶನ್ ಹೊರಡಿಸಿರುವ ಪ್ರದೇಶದ ಜನರು 3 ತಿಂಗಳೊಳಗೆ ಅದನ್ನು ಪಡೆದುಕೊಳ್ಳುವಂತೆ ಆದೇಶಿಸಿದೆ.
ಇಲ್ಲದಿದ್ದಲ್ಲಿ ಅವರ ಎಲ್ಪಿಜಿ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಹೀಗಾಗಿ ಪಿಎನ್ಜಿಗೆ ಬದಲಾಗುವುದು ಇನ್ನು ಆಯ್ಕೆಯಾಗಿ ಉಳಿಯುವುದಿಲ್ಲ, ಅದು ಕಡ್ಡಾಯವಾಗಲಿದೆ. ಆದರೆ ಎಲ್ಲೆಲ್ಲಿ ಪಿಎನ್ಜಿ ಒದಗಿಸಲು ಇನ್ನೂ ತಾಂತ್ರಿಕ ಸಮಸ್ಯೆಯಿದೆಯೋ ಅಲ್ಲೆಲ್ಲ ಎಲ್ಪಿಜಿ ಸಂಪರ್ಕ ಮುಂದುವರಿಯಲಿದೆ. ಪಿಎನ್ಜಿ ಸಂಪರ್ಕವನ್ನು ಅಡುಗೆ ಮನೆಗೆ ನೇರವಾಗಿ ನೀಡಲಾಗಿರುತ್ತದೆ. ಹೀಗಾಗಿ ಸಿಲಿಂಡರ್ಗಳನ್ನು ಬದಲಾಯಿಸುವ ಅಗತ್ಯ ಬೀಳುವುದಿಲ್ಲ.
ಮಾರ್ಚ್ 24ರಂದು ಹೊರಡಿಸಿದ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಆದೇಶದ ಭಾಗವಾಗಿ ಈ ನಿರ್ದೇಶನವನ್ನು ನೀಡಲಾಗಿದೆ. ಈ ಆದೇಶದಲ್ಲಿ ಪೈಪ್ಲೈನ್ ಅಳವಡಿಕೆಗೆ ಸರಳ ಅನುಮೋದನೆ, ಕಾಲಮಿತಿಯಡಿ ಯೋಜನೆ ಪೂರ್ಣಗೊಳಿಸುವುದು ಮಾಡಬೇಕು ಎಂದಿದೆ. ಡೆಡ್ಲೈನ್ ನಿಗದಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಸತಿ ಪ್ರದೇಶಗಳಲ್ಲಿ ಮೂರು ದಿನಗಳೊಳಗೆ ಮೂರು ದಿನಗಳಲ್ಲಿ ಅದು ಸಿಗುವಂತೆ ಆಗಬೇಕು. ಪೈಪ್ ಸಂಪರ್ಕದ ಕಡೇ ಭಾಗವನ್ನು ಕನಿಷ್ಠ 48 ಗಂಟೆಯೊಳಗೆ ಪೂರ್ಣಗೊಳಿಸಬೇಕು. ಅಂಥ ಪ್ರದೇಶಗಳಲ್ಲಿ ಪೈಪ್ಲೈನ್ ಸಂಪರ್ಕಕ್ಕೆ ಅರ್ಜಿಯನ್ನು ತಿರಸ್ಕರಿಸಬಾರದು.
ಅಪ್ರೂವಲ್ ದೊರೆತ ನಾಲ್ಕು ತಿಂಗಳೊಳಗೆ ಪೈಪ್ಲೈನ್ ಹಾಕಲು ಆದೇಶ ಪಡೆದುಕೊಂಡ ಕಂಪನಿಗಳು ಕಾಮಗಾರಿ ಆರಂಭಿಸಬೇಕು ಮುಂತಾದ ನಿರ್ದೇಶನಗಳನ್ನು ಇದರಲ್ಲಿ ನೀಡಲಾಗಿದೆ.




















