ಪತ್ತನಂತಿಟ್ಟ: ಅತ್ಯಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಕೇರಳದ ಪಾಲಕ್ಕಾಡ್ ಶಾಸಕರಾಗಿರುವ ರಾಹುಲ್ ಮಂಕೂಟತಿಲ್ ಅವರನ್ನು ಅಪರಾಧ ವಿಭಾಗದ ವಿಶೇಷ ತನಿಖಾ ತಂಡ ಬಂಧಿಸಿದೆ. ಶನಿವಾರ (ಜನವರಿ 10) ಮಧ್ಯರಾತ್ರಿ ಪಾಲಕ್ಕಾಡ್‌ನಲ್ಲಿರುವ ಹೋಟೆಲ್‌ನಿಂದ ಅವರನ್ನು ವಶಕ್ಕೆ ಪಡೆದು, ಪತ್ತನಂತಿಟ್ಟ ಜಿಲ್ಲೆಯ ಎಆರ್ ಕ್ಯಾಂಪ್‌ಗೆ ಕರೆದೊಯ್ಯಲಾಗಿದೆ.
ವಿಚಾರಣೆ ಪೂರ್ಣಗೊಂಡ ನಂತರ, ಶಾಸಕರನ್ನು ತಿರುವಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ದಾಖಲಾಗಿರುವ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.
ಇದನ್ನೂ ಓದಿ: ಬಿಜೆಪಿ ಉಪಾಧ್ಯಕ್ಷ ಆತ್ಮಹತ್ಯೆಗೆ ಶರಣು
ಈ ಹಿಂದೆ ರಾಹುಲ್ ಮಂಕೂಟತಿಲ್ ವಿರುದ್ಧ ದಾಖಲಾಗಿದ್ದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಅವರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಹಾಗೂ ಮಧ್ಯಂತರ ರಕ್ಷಣೆ ಪಡೆದಿದ್ದರು. ಆದರೆ ವರದಿಗಳ ಪ್ರಕಾರ, ಮೂರನೇ ದೂರಿನ ಮೇರೆಗೆ ಅವರು ಮತ್ತೆ ಪರಾರಿಯಾಗುವ ಸಾಧ್ಯತೆಯನ್ನು ತಪ್ಪಿಸುವ ಸಲುವಾಗಿ ಪೊಲೀಸರು ತ್ವರಿತ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹಿಂದಿನ ಎರಡು ಪ್ರಕರಣಗಳ ಸಂದರ್ಭದಲ್ಲಿಯೂ ನ್ಯಾಯಾಲಯದಿಂದ ಬಂಧನದ ರಕ್ಷಣೆ ಪಡೆಯುವವರೆಗೆ ಅವರು ತಲೆಮರೆಸಿಕೊಂಡಿದ್ದರು ಎಂಬ ಆರೋಪಗಳಿವೆ.
ಪತನಂತಿಟ್ಟ ಜಿಲ್ಲೆಯ ಸ್ಥಳೀಯ ಮಹಿಳೆಯೊಬ್ಬರು ಸಲ್ಲಿಸಿದ ಇತ್ತೀಚಿನ ದೂರಿನ ಮೇರೆಗೆ, ರಾಹುಲ್ ಮಂಕೂಟತಿಲ್ ವಿರುದ್ಧ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಈಗಾಗಲೇ ರಾಹುಲ್ ವಿರುದ್ಧದ ಎರಡು ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಪಘಾತ: DYSP ವೈಷ್ಣವಿ ಅವರ ತಾಯಿ ಸೇರಿ ಇಬ್ಬರು ಸಾವು
ಹಿಂದಿನ ಪ್ರಕರಣಗಳಲ್ಲಿ, ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಹಾಗೂ ನಂತರ ಗರ್ಭಪಾತಕ್ಕೆ ಒತ್ತಾಯಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ಮಹಿಳೆಯೊಬ್ಬರು ಮದುವೆಯ ಭರವಸೆ ನೀಡಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರಿದ್ದರು.
ಮೊದಲ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ರಾಹುಲ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದರೆ, ಎರಡನೇ ಪ್ರಕರಣದಲ್ಲಿ ತಿರುವನಂತಪುರದ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಈ ಎಲ್ಲಾ ಲೈಂಗಿಕ ದೌರ್ಜನ್ಯ ಆರೋಪಗಳು ಬಹಿರಂಗವಾದ ಬಳಿಕ, ಕಾಂಗ್ರೆಸ್ ಪಕ್ಷವು ರಾಹುಲ್ ಮಂಕೂಟತಿಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಆದರೂ ಅವರು ಶಾಸಕರ ಸ್ಥಾನವನ್ನು ಮುಂದುವರಿಸಿಕೊಂಡಿದ್ದರು. ಇತ್ತೀಚಿನ ಬಂಧನವು ಕೇರಳ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.






















