ಕರೂರು (ತಮಿಳುನಾಡು): ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಮತ್ತು ನಟ ವಿಜಯ್ ತಳಪತಿ (Vijay Thalapathy) ಅವರ ಕರೂರುನಲ್ಲಿ ನಡೆದ ಜನಸಮಾವೇಶದಲ್ಲಿ ಭೀಕರ ಕಾಲ್ತುಳಿತ ಘಟನೆ ಸಂಭವಿಸಿದಂತೆ ನಟ ವಿಜಯ್ ಅವರ ಭಾವುಕರ ವಿಡಿಯೋ ಸಂದೇಶ ನೀಡಿದ್ದಾರೆ.
ವಿಜಯ್ ಅವರ ಭಾವುಕರ ವಿಡಿಯೋ ಪ್ರತಿಕ್ರಿಯೆ: ಈ ಘಟನೆ ಬಳಿಕ ಮೊದಲ ಬಾರಿಗೆ ತಮ್ಮ ಅಧಿಕೃತ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ವಿಜಯ್ ಅವರು, ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ನನ್ನ ಜೀವನದಲ್ಲಿ ಇಂತಹ ನೋವಿನ ಕ್ಷಣ ನೋಡಿರಲಿಲ್ಲ. ಅಭಿಮಾನಿಗಳು, ಜನರು ಸಾವಿಗೀಡಾದ್ದು ಮನಸ್ಸಿಗೆ ತುಂಬ ನೋವು ತಂದಿದೆ. ಗಾಯಾಳುಗಳನ್ನು ಶೀಘ್ರದಲ್ಲೇ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ. ನಾನು ಮನುಷ್ಯತಾನೆ, ಇಂತಹ ದುಃಖವನ್ನು ತಡೆಯುವುದು ಬಹಳ ಕಷ್ಟ. ಈ ಪ್ರಕರಣಕ್ಕೆ ಕಾರಣವೇನು ಎಂಬುದು ಶೀಘ್ರದಲ್ಲೇ ಹೊರಬರಲಿದೆ” ಎಂದು ವಿಜಯ್ ಹೇಳಿದರು.
ಕಾರ್ಯಕರ್ತರ ಬಂಧನ: ನನ್ನ ಪಕ್ಷದ ಕಚೇರಿಗೆ ಬಂದು ನನ್ನ ಮೇಲೆ ಕ್ರಮ ಕೈಗೊಳ್ಳಬಹುದು. ಆದರೆ ನಿರಪರಾಧ ಕಾರ್ಯಕರ್ತರ ಮೇಲೆ ಕ್ರಮ ಬೇಡ. ನನ್ನನ್ನು ಟಾರ್ಗೆಟ್ ಮಾಡಿ, ಜನರನ್ನು, ಪಕ್ಷದ ಕಾರ್ಯಕರ್ತರನ್ನು ಬೇಡ” ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನೇ ಉದ್ದೇಶಿಸಿ, “ಮುಖ್ಯಮಂತ್ರಿಗಳೇ, ನಾನು ನಿಮಗೆ ವಿನಂತಿಸುತ್ತೇನೆ. ನನ್ನ ವಿರುದ್ಧ ನೀವು ಏನೇ ಕ್ರಮ ಕೈಗೊಳ್ಳಬಹುದು, ಆದರೆ ನನ್ನ ಕಾರ್ಯಕರ್ತರಿಗೆ ತೊಂದರೆ ಕೊಡಬೇಡಿ” ಎಂದು ಕೋರಿದ್ದಾರೆ.
ರಾಜಕೀಯ ಟೀಕೆ: ವಿಡಿಯೋ ಹೇಳಿಕೆಯಲ್ಲಿ ವಿಜಯ್, ಈ ದುರಂತದ ಹಿನ್ನೆಲೆಯಲ್ಲಿ ತಮ್ಮ ಮತ್ತು ತಮ್ಮ ಪಕ್ಷವನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾರೆ. “ಇಂತಹ ಘಟನೆ ನಡೆದುಹೋಗಿದೆ, ಅದನ್ನು ಯಾರೂ ಹಿಂದಿರುಗಿಸಲಾರರು. ಆದರೆ ತನಿಖೆಯಿಂದ ಸತ್ಯ ಹೊರಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ, “ರಾಜಕೀಯವಾಗಿ ನನ್ನನ್ನು ಟಾರ್ಗೆಟ್ ಮಾಡಿ, ಜನರನ್ನು ಅಥವಾ ಪಕ್ಷದ ಕಾರ್ಯಕರ್ತರನ್ನು ಬೇಡ” ಎಂದು ಡಿಎಂಕೆ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.
ಜನರಲ್ಲಿ ಆಕ್ರೋಶ ಮತ್ತು ದುಃಖ: ಈ ದುರಂತದಿಂದ ತಮಿಳುನಾಡಿನಾದ್ಯಂತ ಆಕ್ರೋಶ ಹಾಗೂ ದುಃಖದ ಅಲೆ ಎದ್ದಿದೆ. ವಿಜಯ್ ಅವರ ಪಕ್ಷ TVK ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಪ್ರಭಾವ ಬೀರತೊಡಗಿರುವ ಸಮಯದಲ್ಲಿ ಈ ಘಟನೆ ಸಂಭವಿಸಿರುವುದರಿಂದ, ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.