ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಮ್ಮೆ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಅಮೆರಿಕದ ಖ್ಯಾತ ಖಾಸಗಿ ಸಂಸ್ಥೆಯಾದ ಎಎಸ್‌ಟಿ ಸ್ಪೇಸ್‌ಮೊಬೈಲ್ ಅಭಿವೃದ್ಧಿಪಡಿಸಿದ ‘ಬ್ಲೂಬರ್ಡ್ ಬ್ಲಾಕ್-2’ (BlueBird Block-2) ವಾಣಿಜ್ಯ ಸಂವಹನ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಭೂ ಕಕ್ಷೆಗೆ ಸೇರಿಸುವಲ್ಲಿ ಸಾಧನೆ ಮಾಡಿದೆ.
ಡಿಸೆಂಬರ್ 24ರ ಬೆಳಿಗ್ಗೆ 8.55ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ LVM3-M6 ಭಾರೀ ರಾಕೆಟ್ ಮೂಲಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಡಾವಣೆಯಾದ ಸುಮಾರು 15 ನಿಮಿಷಗಳ ಒಳಗೆ ಉಪಗ್ರಹವನ್ನು ಕೆಳ ಭೂಮಿಯ ಕಕ್ಷೆ (LEO) ಯಲ್ಲಿ ನಿಖರವಾಗಿ ಸ್ಥಾಪಿಸಲಾಗಿದೆ.
ಇದನ್ನೂ ಓದಿ: ನನ್ನ ಆ ಮಾತು ಯಾರಿಗೆ ಅರ್ಥ ಆಗಬೇಕೋ ಅವರಿಗೆ ಆಗಿದೆ: ಕಿಚ್ಚ ಸುದೀಪ್
ಈ ಸಾಧನೆಯೊಂದಿಗೆ ಬ್ಲೂಬರ್ಡ್ ಬ್ಲಾಕ್-2 ಭೂ ಕಕ್ಷೆಯಲ್ಲಿ ನಿಯೋಜಿಸಲಾದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ, ಇದು ಭಾರತೀಯ ನೆಲದಿಂದ LVM3 ರಾಕೆಟ್ ಮೂಲಕ ಉಡಾವಣೆಗೊಂಡ ಅತ್ಯಂತ ಭಾರವಾದ ಪೇಲೋಡ್ ಆಗಿದೆ.
ಈ ಉಪಗ್ರಹವು ಮುಂದಿನ ತಲೆಮಾರಿನ ಬಾಹ್ಯಾಕಾಶ ಆಧಾರಿತ ಸಂವಹನ ವ್ಯವಸ್ಥೆಯ ಭಾಗವಾಗಿದ್ದು, ಸಾಮಾನ್ಯ ಮೊಬೈಲ್ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಉಪಗ್ರಹದ ಮೂಲಕ 4G ಮತ್ತು 5G ಸೇವೆಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ. ಧ್ವನಿ ಮತ್ತು ವೀಡಿಯೋ ಕರೆಗಳು, ಪಠ್ಯ ಸಂದೇಶಗಳು, ಸ್ಟ್ರೀಮಿಂಗ್ ಮತ್ತು ಡೇಟಾ ಸೇವೆಗಳನ್ನು ಭೂಮಿಯ ಯಾವುದೇ ಮೂಲಸೌಕರ್ಯವಿಲ್ಲದೆ ನೇರವಾಗಿ ಉಪಗ್ರಹದ ಮೂಲಕ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಇಸ್ರೋ ನೀಡಿದ ಮಾಹಿತಿಯಂತೆ, ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವು 223 ಮೀಟರ್‌ಗಳಷ್ಟು ವಿಶಾಲ ಶ್ರೇಣಿಯ ಸಂವಹನ ಅರೆ ಹೊಂದಿದ್ದು, ಇದು ಇತಿಹಾಸದಲ್ಲೇ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹಗಳಲ್ಲಿ ಒಂದಾಗಿದೆ. ಈ ಮಿಷನ್ ಜಾಗತಿಕ LEO ಉಪಗ್ರಹ ಸಮೂಹದ (Constellation) ಪ್ರಮುಖ ಅಂಗವಾಗಿದೆ.
ಈ ಉಡಾವಣೆಯು ಇಸ್ರೋದ ವಾಣಿಜ್ಯ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್ ನಡುವೆ ನಡೆದಿರುವ ವಾಣಿಜ್ಯ ಒಪ್ಪಂದದ ಭಾಗವಾಗಿದೆ. ವಿದೇಶಿ ಉಪಗ್ರಹಗಳನ್ನು ಭಾರತೀಯ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಇಸ್ರೋ ದೇಶಕ್ಕೆ ಆದಾಯ ತರುವ ಕಾರ್ಯವನ್ನೂ ಮಾಡುತ್ತಿದೆ.
ಇದನ್ನೂ ಓದಿ: ಖ್ಯಾತ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ನಿಧನ
ಎನ್‌ಎಸ್‌ಐಎಲ್ ಮೂಲಕ ನಡೆಯುವ ಇಂತಹ ವಾಣಿಜ್ಯ ಉಡಾವಣೆಗಳನ್ನು “ಬಾಹ್ಯಾಕಾಶ ಟ್ಯಾಕ್ಸಿ ಸೇವೆ”ಗೆ ಹೋಲಿಸಲಾಗುತ್ತಿದ್ದು, ಇಲ್ಲಿ ಉಡಾವಣೆ ಸೇವೆ ನೀಡುವ ಸಂಸ್ಥೆಯಾಗಿ ಭಾರತ ಕಾರ್ಯನಿರ್ವಹಿಸುತ್ತದೆ.
ಈ ಉಪಗ್ರಹವನ್ನು ಡಿಸೆಂಬರ್ 15ರಂದು ಉಡಾವಣೆಗೊಳಿಸಲು ಮೊದಲಿಗೆ ಯೋಜಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಉಡಾವಣೆಯನ್ನು ಮುಂದೂಡಲಾಗಿತ್ತು. ಇದೀಗ ಯಶಸ್ವಿ ಉಡಾವಣೆಯೊಂದಿಗೆ ಇಸ್ರೋ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ.
ಈ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.









