ಭಾರತದ 6,000 ವರ್ಷದ ಕಡಲ ಸಾಂಪ್ರದಾಯಕ್ಕೆ ಜೀವಂತ ಸಾಕ್ಷಿ
ಭಾರತದ ಶ್ರೀಮಂತ ಕಡಲ ಪರಂಪರೆಯನ್ನು ಜಗತ್ತಿಗೆ ಮರುಪರಿಚಯಿಸುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ, ಸಾಂಪ್ರದಾಯಿಕ ತಂತ್ರಗಳನ್ನು ಬಳಸಿ ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾದ ‘ಐಎನ್‌ಎಸ್‌ವಿ ಕೌಂಡಿನ್ಯಾ’ ಹಡಗು ಇಂದು ಓಮನ್‌ಗೆ ತನ್ನ ಮೊದಲ ವಿದೇಶಿ ಸಮುದ್ರಯಾನವನ್ನು ಆರಂಭಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹಡಗಿನ ವಿಶೇಷತೆಯನ್ನು ಮತ್ತು ಅದರ ಹಿಂದೆ ಇರುವ ಶ್ರಮವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಸಮಕಾಲೀನ ಹಡಗುಗಳಿಗಿಂತ ಭಿನ್ನವಾಗಿ ಈ ನೌಕೆಯನ್ನು ಮರದ ಹಲಗೆಗಳು ಮತ್ತು ದಿಮ್ಮಿಗಳನ್ನು ತೆಂಗಿನಕಾಯಿ ನಾರಿನ ಹಗ್ಗಗಳಿಂದ ಬೆಸೆದು, ನಂತರ ನೈಸರ್ಗಿಕ ರಾಳಗಳಿಂದ ಮುಚ್ಚಿ ನಿರ್ಮಿಸಲಾಗಿದೆ. ಈ ವಿಧಾನವು ಒಮ್ಮೆ ಭಾರತದ ಕರಾವಳಿಗಳಲ್ಲೂ ಹಾಗೂ ಹಿಂದೂ ಮಹಾಸಾಗರದಾದ್ಯಂತವೂ ವ್ಯಾಪಕವಾಗಿ ಬಳಕೆಯಲ್ಲಿದ್ದ ಪ್ರಾಚೀನ ಹಡಗು ನಿರ್ಮಾಣ ಸಂಪ್ರದಾಯದ ಜೀವಂತ ಪ್ರತಿಬಿಂಬವಾಗಿದೆ.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR
ಪೋರ್‌ಬಂದರ್‌ನಿಂದ ಓಮನ್‌ನ ಮಸ್ಕತ್‌ಗೆ ಹೊರಟಿರುವ ಈ ಸಮುದ್ರಯಾನವನ್ನು ಉಲ್ಲೇಖಿಸಿದ ಪ್ರಧಾನಿ, “ಐಎನ್‌ಎಸ್‌ವಿ ಕೌಂಡಿನ್ಯಾ ತನ್ನ ಮೊದಲ ಸಾಗರಯಾನ ಆರಂಭಿಸುತ್ತಿರುವುದನ್ನು ನೋಡುವುದು ಅದ್ಭುತ. ಇದು ಭಾರತದ ಶ್ರೀಮಂತ ಕಡಲ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ತೋರಿಸುತ್ತದೆ” ಎಂದು ತಿಳಿಸಿದ್ದಾರೆ.
ಈ ವಿಶಿಷ್ಟ ಹಡಗನ್ನು ರೂಪಿಸಲು ಶ್ರಮಿಸಿದ ವಿನ್ಯಾಸಕರು, ಕುಶಲಕರ್ಮಿಗಳು, ಹಡಗು ನಿರ್ಮಾಣಗಾರರು ಹಾಗೂ ಭಾರತೀಯ ನೌಕಾಪಡೆಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಗಲ್ಫ್ ಪ್ರದೇಶದೊಂದಿಗೆ ಭಾರತ ಹೊಂದಿರುವ ಐತಿಹಾಸಿಕ ಸಂಪರ್ಕಗಳನ್ನು ಮರುಕಳಿಸುವ ಈ ಪ್ರಯಾಣ ಸುರಕ್ಷಿತ ಹಾಗೂ ಸ್ಮರಣೀಯವಾಗಿರಲಿ ಎಂದು ಸಿಬ್ಬಂದಿಗೆ ಶುಭಾಶಯ ಕೋರಿದ್ದಾರೆ.
ಪ್ರಮುಖವಾಗಿ, ಈ ನೌಕೆಯ ನಿರ್ಮಾಣದಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಯಾವುದೇ ಸ್ಥಳ ನೀಡಲಾಗಿಲ್ಲ. ಸುಮಾರು 6,000 ವರ್ಷಗಳ ಹಿಂದೆ ನೌಕೆಗಳನ್ನು ಹೇಗೆ ಸಿದ್ಧಪಡಿಸಲಾಗುತ್ತಿತ್ತೋ ಅದೇ ಮಾದರಿಯಲ್ಲಿ ಐಎನ್‌ಎಸ್‌ವಿ ಕೌಂಡಿನ್ಯಾ ರೂಪುಗೊಂಡಿದೆ ಎಂಬುದು ಇದರ ಅತಿ ದೊಡ್ಡ ವಿಶೇಷತೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ಕಲಬುರಗಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಈ ಮಹತ್ವದ ಯೋಜನೆಗೆ ಪ್ರೇರಣೆಯಾಗಿದ್ದು, ಪ್ರಧಾನ ಮಂತ್ರಿಯವರ ಆರ್ಥಿಕ ಸಲಹೆಗಾರರಲ್ಲೊಬ್ಬರಾದ ಸಂಜೀವ್ ಸನ್ಯಾಲ್ ಬರೆದ ‘ದಿ ಓಶನ್ ಆಫ್ ಚರ್ನ್’ ಎಂಬ ಪುಸ್ತಕ. ಪ್ರಾಚೀನ ಭಾರತದ ನೌಕಾಯಾನ ಇತಿಹಾಸದ ಕುರಿತು ಸಂಶೋಧನೆ ನಡೆಸುವ ಸಂದರ್ಭದಲ್ಲಿ ದೊರೆತ ಮಾಹಿತಿಗಳೇ ಈ ಹಡಗಿನ ಕಲ್ಪನೆ ಮತ್ತು ರೂಪುಗೊಳ್ಳಲು ಕಾರಣವಾಯಿತು ಎಂದು ಸಂಜೀವ್ ಸನ್ಯಾಲ್ ಅವರು ನೌಕೆ ಲೋಕಾರ್ಪಣೆ ವೇಳೆ ಸ್ವತಃ ವಿವರಿಸಿದ್ದಾರೆ.
ಒಟ್ಟಾರೆ, ಐಎನ್‌ಎಸ್‌ವಿ ಕೌಂಡಿನ್ಯಾ ಕೇವಲ ಒಂದು ಹಡಗು ಅಲ್ಲ; ಅದು ಭಾರತದ ಪುರಾತನ ಜ್ಞಾನ, ಕೌಶಲ್ಯ ಮತ್ತು ಸಮುದ್ರ ಸಂಸ್ಕೃತಿಯ ಹೆಮ್ಮೆಯ ಸಂಕೇತವಾಗಿ ಜಗತ್ತಿನ ಗಮನ ಸೆಳೆಯುತ್ತಿದೆ






















