ಭಾರತೀಯ ನೌಕಾಪಡೆಗೆ ಮತ್ತೊಂದು ಅತ್ಯಾಧುನಿಕ ಯುದ್ಧನೌಕೆ ಸೇರ್ಪಡೆಯಾಗುತ್ತಿದ್ದು, ಸಂಪೂರ್ಣ ಸ್ವದೇಶಿ ನಿರ್ಮಿತ ಸ್ಟೆಲ್ತ್ ಫ್ರಿಗೇಟ್ ತಾರಗಿರಿ (INS Taragiri (F41)) ಕಾರ್ಯಾರಂಭಕ್ಕೆ ಸಜ್ಜಾಗಿದೆ. ಏಪ್ರಿಲ್ 3, 2026 ರಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಇದನ್ನು ಅಧಿಕೃತವಾಗಿ ನೌಕಾಪಡೆಯ ಸೇವೆಗೆ ಸೇರಿಸಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದು, ಭಾರತ ಸ್ವಾವಲಂಬಿ ರಕ್ಷಣಾ ಶಕ್ತಿಯತ್ತ ಸಾಗುತ್ತಿರುವ ಮಹತ್ವದ ಹೆಜ್ಜೆಯಾಗಿ ಇದನ್ನು ಪರಿಗಣಿಸಲಾಗಿದೆ.
‘ತಾರಗಿರಿ’ – ಕಡಲಿನ ಮಾಯಾವಿ ಯೋಧ: ‘ಪ್ರಾಜೆಕ್ಟ್ 17A’ ವರ್ಗದ ನಾಲ್ಕನೇ ಯುದ್ಧನೌಕೆಯಾಗಿರುವ ಐಎನ್ಎಸ್ ತಾರಗಿರಿ, ಸ್ಟೆಲ್ತ್ ತಂತ್ರಜ್ಞಾನವನ್ನು ಹೊಂದಿದ್ದು, ಶತ್ರುಗಳ ರಾಡಾರ್ಗಳಿಗೆ ಸುಲಭವಾಗಿ ಪತ್ತೆಯಾಗದ ಸಾಮರ್ಥ್ಯ ಹೊಂದಿದೆ. ಇದು ಸಮುದ್ರದ ಮೇಲ್ಮೈ ಹಾಗೂ ಆಳದಲ್ಲಿ ಶತ್ರುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ.
ಪ್ರಮುಖ ವೈಶಿಷ್ಟ್ಯಗಳು: ಈ ನೌಕೆಯನ್ನು Mazagon Dock Shipbuilders Limited (MDL), ಮುಂಬೈಯಲ್ಲಿ ನಿರ್ಮಿಸಿದ್ದು, ಸುಮಾರು 75%ಕ್ಕೂ ಹೆಚ್ಚು ಸ್ಥಳೀಯ ತಂತ್ರಜ್ಞಾನ ಮತ್ತು ಸಾಮಗ್ರಿಗಳನ್ನು ಬಳಸಲಾಗಿದೆ. ಸ್ಟೆಲ್ತ್ ತಂತ್ರಜ್ಞಾನ – ರಾಡಾರ್ಗೆ ಸಿಗದ ಕಾರ್ಯಾಚರಣೆ, CODOG ಪ್ರೊಪಲ್ಷನ್ ವ್ಯವಸ್ಥೆ – ವೇಗ ಹಾಗೂ ದೀರ್ಘಾವಧಿ ಕಾರ್ಯಾಚರಣೆ, ಸೂಪರ್ಸಾನಿಕ್ ಕ್ಷಿಪಣಿಗಳು – ಮೇಲ್ಮೈ ಗುರಿಗಳನ್ನು ನಾಶಪಡಿಸಲು. ಸರ್ಫೇಸ್-ಟು-ಏರ್ ಕ್ಷಿಪಣಿಗಳು – ಗಗನ ದಾಳಿಗಳಿಗೆ ಪ್ರತಿಕ್ರಿಯೆ. ಆಂಟಿ-ಸಬ್ಮೆರಿನ್ ಯುದ್ಧ ವ್ಯವಸ್ಥೆ – ಜಲಾಂತರ್ಗಾಮಿ ದಾಳಿಗಳಿಗೆ ತಡೆ
ಗೇಮ್ ಚೇಂಜರ್ ಯಾಕೆ?: ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಈ ನೌಕೆ ಭಾರತದ ಸಾಗರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಗೇಮ್ ಚೇಂಜರ್ ಆಗಲಿದೆ. ತಾರಗಿರಿ ಯುದ್ಧ ಮಾತ್ರವಲ್ಲದೆ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಗಳಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ.
ಭಾರತೀಯ ನೌಕಾಪಡೆಯ ಸ್ವಾವಲಂಬನೆ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಐಎನ್ಎಸ್ ತಾರಗಿರಿ ಮತ್ತೊಂದು ದೊಡ್ಡ ಸಾಕ್ಷಿಯಾಗಿದ್ದು, ‘ಮೇಕ್ ಇನ್ ಇಂಡಿಯಾ’ ಅಭಿಯಾನದ ಯಶಸ್ಸಿನ ಸಂಕೇತವಾಗಿದೆ.























