ಆರ್ಥಿಕ ಪ್ರಗತಿ: 2038ಕ್ಕೆ ಚೀನಾ ಹಿಂದಿಕ್ಕಿ ಭಾರತ ನಂ.2

0
24

ನವದೆಹಲಿ: ಭಾರತದ ಆರ್ಥಿಕತೆ ಇನ್ನು ಐದು ವರ್ಷಗಳಲ್ಲಿ 20.7 ಲಕ್ಷ ಕೋಟಿ ಡಾಲರ್ ತಲುಪಲಿದೆ. 2038ರ ಹೊತ್ತಿಗೆ 34.2 ಲಕ್ಷ ಕೋಟಿ ಡಾಲರ್ ಮುಟ್ಟಲಿದ್ದು, ಚೀನಾ ಹಿಂದಿಕ್ಕಿ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಇವೈ ಎಕಾನಮಿ ವಾಚ್‌ನ ವರದಿ ತಿಳಿಸಿದೆ.

ಭಾರತದ ವಾರ್ಷಿಕ ಆರ್ಥಿಕ ಬೆಳವಣಿಗೆ ಪ್ರಸ್ತುತ 6.5% ಇದ್ದು, ಅಮೆರಿಕ 2.1%ನಷ್ಟು ಆರ್ಥಿಕ ಪ್ರಗತಿಯನ್ನು ಹೊಂದಿದೆ. ಇದೇ ಪ್ರಮಾಣದಲ್ಲಿ ಮುಂದುವರಿದಲ್ಲಿ 2038ರ ಹೊತ್ತಿಗೆ ಭಾರತದ ಜಿಡಿಪಿಯು ಖರೀದಿ ಶಕ್ತಿ ಹೋಲಿಕೆ(ಪಿಪಿಪಿ)ಯಲ್ಲಿ ಅಮೆರಿಕವನ್ನು ದಾಟಲಿದೆ.

2030ರ ಹೊತ್ತಿಗೆ ಚೀನಾದ ಜಿಡಿಪಿ ಪಿಪಿಪಿ ಮಾನದಂಡದಲ್ಲಿ 42.2 ಲಕ್ಷ ಕೋಟಿ ಡಾಲರ್ ಮುಟ್ಟಲಿದೆ. ಆದರೆ ಜನರ ಮಧ್ಯಮ ವಯಸ್ಸು ಜಾಸ್ತಿಯಾಗಿ, ಹೆಚ್ಚು ವಯಸ್ಸಾದವರು ತುಂಬಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಅಮೆರಿಕದ ಬೆದರಿಕೆ ಸುಂಕದ ನಡುವೆಯೂ, ಈಗ ಆಗುತ್ತಿರುವ ರಚನಾತ್ಮಕ ಬೆಳವಣಿಗೆಗಳು ಭಾರತದ ಆರ್ಥಿಕತೆ ಪ್ರಗತಿಗೆ ಪೂರಕವಾಗಲಿದೆ ಎನ್ನುವ ಸಕಾರಾತ್ಮಕ ವರದಿ ಹೊರಬಿದ್ದಿದೆ. ಭಾರತದ ನಾಗರಿಕರ ಮಧ್ಯಮ ವಯಸ್ಸು 28.8 ಇದ್ದು, 2024ರಲ್ಲಿ ಸಾಲ ಮತ್ತು ಜಿಡಿಪಿ ಅನುಪಾತ 81.3%ನಷ್ಟಿದ್ದು, ಅದು 2030ರ ಹೊತ್ತಿಗೆ 75.8%ಗೆ ಇಳಿಯಲಿದೆ.

ಇತರ ದೊಡ್ಡ ಆರ್ಥಿಕತೆ ದೇಶಗಳ ನಡುವೆ ಭಾರತದ ನಿರ್ವಹಣೆ ಅತ್ಯುತ್ತಮವಾಗಿದ್ದು, ಎರಡನೇ ಅತಿ ದೊಡ್ಡ ಆರ್ಥಿಕತೆ ದೇಶವಾಗಲಿದೆ ಎಂದು ವರದಿ ತಿಳಿಸಿದೆ. ಈಗ ಭಾರತ 4.19 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿದೆ.

ಅಮೆರಿಕ ಆರ್ಥಿಕವಾಗಿ ಬಲವಾಗಿದ್ದರೂ, ಸಾಲದ ಪ್ರಮಾಣ ಹೆಚ್ಚಾಗಿ ಸಂಕಷ್ಟಕ್ಕೀಡಾಗಲಿದೆ, ಜರ್ಮನಿ, ಜಪಾನ್ ತಾಂತ್ರಿಕವಾಗಿ ಮುಂದುವರಿದಿದ್ದರೂ, ವಯಸ್ಸಾದ ಜನ ಹೆಚ್ಚಾಗಿ ತಾಪತ್ರಯಗಳನ್ನು ಉಂಟು ಮಾಡುತ್ತವೆ.

ಜಾಗತಿಕ ಅಸಮತೋಲನ ತಡೆಯುವ ಶಕ್ತಿ ಭಾರತಕ್ಕಿದೆ: “ಕೌಶಲ್ಯಪೂರ್ಣ ಕಾರ್ಮಿಕ ಬಲ, ಉಳಿಕೆ ಮತ್ತು ಬಂಡವಾಳದ ಪ್ರಮಾಣದಲ್ಲಿ ಭಾರತ ಶಕ್ತಿಶಾಲಿಯಾಗಿದೆ. ಜತೆಗೆ ಇತರ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತಕ್ಕೆ ತನ್ನ ಸಾಲವನ್ನು ತಡೆದುಕೊಳ್ಳಬಲ್ಲ ಶಕ್ತಿ ಇದೆ. ಜಾಗತಿಕ ಅಸಮತೋಲನದ ಪರಿಸ್ಥಿತಿಯನ್ನು ಭರಿಸಿಕೊಳುವ ಶಕ್ತಿಯನ್ನೂ ಹೊಂದಿದೆ” ಎಂದು ಇವೈ ಇಂಡಿಯಾ ಸಲಹೆಗಾರ ಡಿ.ಕೆ. ಶ್ರೀವಾಸ್ತವ ಹೇಳಿದ್ದಾರೆ.

Previous articleಮಂಗಳೂರು: ಕಲಾವಿದ ಎರಿಕ್ ಅಲೆಕ್ಸಾಂಡರ್ ಒಜಾರಿಯೊ ನಿಧನ
Next articleವಾಯುಮಾಲಿನ್ಯ ತಗ್ಗಿಸಿದಲ್ಲಿ ಭಾರತೀಯರ ಜೀವಿತಾವಧಿ 3.5 ವರ್ಷ ಹೆಚ್ಚಳ

LEAVE A REPLY

Please enter your comment!
Please enter your name here