14 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಉಚಿತ ‘ಗಾರ್ಡಾಸಿಲ್’ ಡೋಸ್
ನವದೆಹಲಿ: ಕೇಂದ್ರ ಸರ್ಕಾರದ “ಸ್ವಸ್ಥ ನಾರಿ” ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ, ದೇಶಾದ್ಯಂತ ಹೆಣ್ಣುಮಕ್ಕಳಿಗಾಗಿ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ವಿರುದ್ಧದ ಲಸಿಕಾ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಷ್ಟ್ರೀಯ ಮಟ್ಟದ ಈ ಅಭಿಯಾನದಲ್ಲಿ ‘ಗಾರ್ಡಾಸಿಲ್ʼ (Gardasil) ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಮಹತ್ವದ ಹೆಜ್ಜೆ: ಭಾರತದಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಲ್ಲಿ ಒಂದಾದ Cervical Cancer ತಡೆಗಟ್ಟುವದೇ ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ತಜ್ಞರ ಪ್ರಕಾರ, HPV ಸೋಂಕು ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದ್ದು, ಲಸಿಕೆ ನೀಡುವುದರಿಂದ ಭವಿಷ್ಯದಲ್ಲಿ ಈ ರೋಗದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಇದನ್ನೂ ಓದಿ: ʻಹಿಮೋಫಿಲಿಯಾ’ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್
14 ವರ್ಷ ಮೇಲ್ಪಟ್ಟವರಿಗೆ ಉಚಿತ ಡೋಸ್: ಈ ಅಭಿಯಾನದ ಅಡಿಯಲ್ಲಿ 14 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹೆಣ್ಣುಮಕ್ಕಳಿಗೆ ಉಚಿತವಾಗಿ ಲಸಿಕೆ ನೀಡಲು ಯೋಜಿಸಲಾಗಿದೆ. ಲಸಿಕಾ ವಿತರಣೆಯು ಸ್ವಯಂಪ್ರೇರಿತವಾಗಿದ್ದು, ಎಲ್ಲಾ ವರ್ಗಗಳಿಗೂ ಸಮಾನವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ.
ನಾಲ್ಕು ವಿಧದ ವೈರಸ್‌ಗಳ ವಿರುದ್ಧ ರಕ್ಷಣೆ: ಕ್ವಾಡ್ರಿವೇಲೆಂಟ್ HPV ಲಸಿಕೆಯಾದ ಗಾರ್ಡಾಸಿಲ್, ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ HPV ಮಾದರಿ 16 ಮತ್ತು 18 ರ ವಿರುದ್ಧ ಮಾತ್ರವಲ್ಲದೆ, 6 ಮತ್ತು 11 ಮಾದರಿಗಳ ವಿರುದ್ಧವೂ ರಕ್ಷಣೆ ನೀಡುತ್ತದೆ. ಈ ಮೂಲಕ ಕ್ಯಾನ್ಸರ್ ಜೊತೆಗೆ ಇತರ HPV ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನೂ ತಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ‘ಕೇರಳ’ದ ಹೆಸರು ಬದಲಾವಣೆ: ಕೇಂದ್ರ ಸಚಿವ ಸಂಪುಟ ಅನುಮೋದನೆ
ಒಂದೇ ಡೋಸ್ ಸಾಕು: ಶಿಫಾರಸು ಮಾಡಿದ ವಯೋಮಿತಿಯ ಹೆಣ್ಣುಮಕ್ಕಳಿಗೆ ಲಸಿಕೆಯ ಒಂದು ಡೋಸ್ ನೀಡಿದರೂ ದೀರ್ಘಕಾಲದ ಮತ್ತು ಬಲವಾದ ರಕ್ಷಣೆಯನ್ನು ಒದಗಿಸುತ್ತದೆ ಎಂಬುದನ್ನು ಜಾಗತಿಕ ಹಾಗೂ ಭಾರತೀಯ ವೈಜ್ಞಾನಿಕ ಅಧ್ಯಯನಗಳು ದೃಢಪಡಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಅಭಿಯಾನವನ್ನು ಸರಳ ಹಾಗೂ ವ್ಯಾಪಕವಾಗಿ ಜಾರಿಗೊಳಿಸಲು ಅನುಕೂಲವಾಗಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳು ಶೀಘ್ರದಲ್ಲೇ ರಾಜ್ಯಗಳಿಗೆ ರವಾನೆಯಾಗಲಿದ್ದು, ಶಾಲಾ ಆಧಾರಿತ ಲಸಿಕಾ ಶಿಬಿರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಹಂತ ಹಂತವಾಗಿ ಕಾರ್ಯಕ್ರಮ ಜಾರಿಯಾಗಲಿದೆ. ಪ್ರಥಮ ಹಂತದಲ್ಲಿ ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಕಂಡುಬರುವ ರಾಜ್ಯಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಧಾರವಾಡದಲ್ಲಿ ಉಗ್ರಗೊಂಡ ಉದ್ಯೋಗಾಕಾಂಕ್ಷಿಗಳ ಹೋರಾಟ: ಸಚಿವರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ
ಕೇಂದ್ರ ಸರ್ಕಾರ ಈ ಬೃಹತ್ ಲಸಿಕಾ ಅಭಿಯಾನದ ಮೂಲಕ ಮಹಿಳೆಯರ ಸಾವಿಗೆ ಪ್ರಮುಖ ಕಾರಣವಾಗಿರುವ ಕ್ಯಾನ್ಸರ್ ವಿರುದ್ಧ ತಳಮಟ್ಟದಿಂದಲೇ ಹೋರಾಟ ನಡೆಸಲು ಮುಂದಾಗಿದೆ.




















