ಹೊಸ ಭರವಸೆ, ಸಂಕಲ್ಪಗಳೊಂದಿಗೆ ಮುಂದುವರಿಯಲು ಭಾರತ ಸಿದ್ಧ

0
4

ನವದೆಹಲಿ: ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ವಿಜ್ಞಾನ ಪ್ರಯೋಗಾಲಯ ಸೇರಿದಂತೆ ವಿಶ್ವದ ಅತಿದೊಡ್ಡ ವೇದಿಕೆಗಳವರೆಗೆ ಎಲ್ಲೆಡೆ ಭಾರತ ಬಲವಾದ ಛಾಪು ಮೂಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 129ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ವಿಶ್ವವೇ ಭಾರತವನ್ನು ಹೆಚ್ಚಿನ ನಿರೀಕ್ಷೆಗಳೊಂದಿಗೆ ನೋಡುತ್ತಿದೆ. ಈ ಭರವಸೆಗೆ ದೇಶದ ಯುವಕರು ಭಾರತದ ಸಾಂಸ್ಕೃತಿಕ ಬೇರುಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು ಮುಖ್ಯ ಕಾರಣವಾಗಿದೆ ಎಂದರು.

ನಾವೀನ್ಯತೆಗಳು ಮತ್ತು ತಾಂತ್ರಿಕ ಪ್ರಗತಿಗಳು ವಿಶ್ವದಾದ್ಯಂತದ ದೇಶಗಳನ್ನು ಪ್ರಭಾವಿತಗೊಳಿಸಿವೆ. ನಮ್ಮ ಯುವಕರು ಹೊಸದನ್ನು ಮಾಡುವ ಉತ್ಸಾಹ ಹೊಂದಿದ್ದಾರೆ. ಅಲ್ಲದೇ ಜಾಗೃತರು ಮತ್ತು ಸಾಮಾಜಿಕ ಪ್ರಜ್ಞೆ ಹೊಂದಿದ್ದಾರೆ ಎಂದರು.

2025ರ ಭಾರತದ ಹೆಮ್ಮೆಯ ಕ್ಷಣಗಳ ಮೆಲುಕು: ಪ್ರಧಾನಿ ನರೇಂದ್ರ ಮೋದಿ, ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 2025 ರಲ್ಲಿ ನಡೆದ ಪ್ರಮುಖ ಘಟನೆಗಳನ್ನು ಮೆಲುಕು ಹಾಕಿದರು. ಈ ವರ್ಷ ನಡೆದ ʼಆಪರೇಷನ್ ಸಿಂಧೂರ್’ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಕೇತವಾಗಿದೆ ಎಂದರು. ಭಾರತ ತನ್ನ ಭದ್ರತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಜಗತ್ತು ಸ್ಪಷ್ಟವಾಗಿ ನೋಡಿದೆ ಎಂದರು.

2025ರಲ್ಲಿ ಭಾರತೀಯ ಕ್ರೀಡಾಪಟುಗಳು ವಿಶೇಷ ಸಾಧನೆ ಮಾಡಿರುವುದು ಕ್ರೀಡಾ ಲೋಕದಲ್ಲೂ ಸ್ಮರಣೀಯ ವರ್ಷವಾಗಿತ್ತು. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪುರುಷರ ಕ್ರಿಕೆಟ್ ತಂಡದ ಸಾಧನೆ. ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಮಹಿಳಾ ಕ್ರಿಕೆಟ್ ತಂಡ. ಮಹಿಳಾ ಅಂಧರ ಟಿ20 ವಿಶ್ವಕಪ್‌ನಲ್ಲೂ ಐತಿಹಾಸಿಕ ಸಾಧನೆ. ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಹಲವಾರು ಪದಕಗಳನ್ನು ಮುಡಿಗೇರಿಸಿಕೊಂಡಿರುವುದನ್ನು ಪ್ರಧಾನಿ ನೆನಪಿಸಿದರು.

ಅಲ್ಲದೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು ಶುಕ್ಲಾ ಅವರ ಸಾಧನೆಯನ್ನು ಶ್ಲಾಘಿಸಿದರು. ಇನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಆಯೋಜಿಸಲಾದ ಶತಮಾನದ ಮಹಾಕುಂಭ ಮೇಳ, ರಾಮ ಮಂದಿರದ ಧ್ವಜಾರೋಹಣ ಪ್ರತಿ ಭಾರತೀಯನಲ್ಲೂ ಹೆಮ್ಮೆಯನ್ನು ತುಂಬಿತು ಎಂದರು.

2025 ಭಾರತಕ್ಕೆ ಹೆಚ್ಚಿನ ವಿಶ್ವಾಸ ನೀಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು. 2026 ರಲ್ಲಿ ಭಾರತ ಹೊಸ ಭರವಸೆಗಳು ಮತ್ತು ಹೊಸ ಸಂಕಲ್ಪಗಳೊಂದಿಗೆ ಮುಂದುವರಿಯಲು ಸಿದ್ಧವಾಗಿದೆ. ಸಾಧನೆಯತ್ತ ಸಾಗುವ ಪ್ರಯಾಣದಲ್ಲಿ 2026 ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಭರವಸೆ ನೀಡಿದರು.

Previous articleಇತಿಹಾಸ ಸೃಷ್ಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಐಎನ್‌ಎಸ್ ವಾಗ್ಶೀರ್ ಸಬ್‌ಮೇರಿನ್‌ನಲ್ಲಿ ಐತಿಹಾಸಿಕ ಪ್ರಯಾಣ