Home Advertisement
Home ಸುದ್ದಿ ದೇಶ ಪಾಕಿಸ್ತಾನದಂತೆ ಭಾರತ ದಲ್ಲಾಳಿಯಲ್ಲ

ಪಾಕಿಸ್ತಾನದಂತೆ ಭಾರತ ದಲ್ಲಾಳಿಯಲ್ಲ

0
22

ನವದೆಹಲಿ: ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟು ದಿನೇದಿನೇ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ, ಟರ್ಕಿ ಸೇರಿದಂತೆ ಹಲವಾರು ದೇಶಗಳು ಅಮೆರಿಕ ಹಾಗೂ ಇರಾನ್ ಮಧ್ಯೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿವೆ. ಇದೇ ರೀತಿ ಭಾರತವೂ ಈ ಯುದ್ಧದ ಉದ್ವಿಗ್ನತೆ ತಗ್ಗಿಸಲು ಪ್ರಯತ್ನಿಸಬೇಕೆಂಬ ಬಲವಾದ ಕೂಗು ಕೇಳಿಬರುತ್ತಿದೆ. ಆದರೆ ಪಾಕಿಸ್ತಾನದಂತೆ ಭಾರತ ದಲ್ಲಾಳಿಯಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸರ್ವ ಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ತಿಳಿಸಿದ್ದಾರೆ.

ಪಾಕಿಸ್ತಾನದ ಮಧ್ಯಸ್ಥಿಕೆಯೇನೂ ಹೊಸ ವಿಷಯವಲ್ಲ. ಅಮೆರಿಕವು 1981ರಿಂದಲೂ ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಜೈಶಂಕರ್ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಚರ್ಚಿಯ ಕುರಿತು ಕರೆದ ಸಭೆಯಲ್ಲಿ ಹೇಳಿದರೆನ್ನಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಈ ಸಭೆಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ ಹಾಗೂ ಟಿಎಂಸಿ ನಾಯಕರು ಭಾಗವಹಿಸಿಲ್ಲ. ಕೇರಳದಲ್ಲಿ ನಿಗದಿಯಾದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಗೆ ಗೈರುಹಾಜರಾಗಿರುವುದಾಗಿ ಕಾಂಗ್ರೆಸ್ ಸಬೂಬು ನೀಡಿದೆ. ಸಭೆಯಲ್ಲಿ ಇಂಧನದ ಸುರಕ್ಷತೆ, ಸದ್ಯದ ಯುದ್ದದ ಪರಿಸ್ಥಿತಿ ಹಾಗೂ ಭಾರತದ ನಿಲುವಿನ ಕುರಿತು ಚರ್ಚಿಸಲಾಯಿತು.

ಹೊರ್ಮುಜಲ್ಲಿ ಹಡಗು ಸಂಚಾರ ಭಾರತದ ರಾಜತಾಂತ್ರಿಕ ಗೆಲುವು: ಹೊರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗುಗಳ ಯಶಸ್ವಿ ಸಂಚಾರವು ರಾಜತಾಂತ್ರಿಕ ಗೆಲುವು. ಹೆಚ್ಚಿನ ದೇಶಗಳ ಹಡಗುಗಳನ್ನು ನಿರ್ಬಂಧಿಸಲಾಗಿದ್ದರೂ ಭಾರತದ ಹಡಗುಗಳು ನಿರಾಯಾಸವಾಗಿ ಈ ಜಲಸಂಧಿ ದಾಟಿದೆ ಎಂದು ಸಭೆಯಲ್ಲಿ ಹಾಜರಿದ್ದ ನಾಯಕರೊಬ್ಬರು ಹೇಳಿದರು. ಭಾರತಕ್ಕೆ ಇನ್ನಷ್ಟು ಹಡಗುಗಳು ಶೀಘ್ರದಲ್ಲೇ ಹೊರ್ಮುಜ್ ಜಲಸಂಧಿ ದಾಟಲಿವೆ ಎಂದೂ ವಿವರಿಸಿದರು. ಸಚಿವರುಗಳಾದ ಅಮಿತ್ ಶಾ, ಕಿರಣ್ ರಿಜಿಜು, ನಿರ್ಮಲಾ ಸೀತಾರಾಮನ್ ಮತ್ತು ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು.