‘ಸಮುದ್ರ ಪ್ರತಾಪ್’ ಭಾರತೀಯ ಕರಾವಳಿ ಪಡೆಗೆ ಸೇರ್ಪಡೆ

0
5

ಗೋವಾ: ಹಡಗು ನಿರ್ಮಾಣ ಹಾಗೂ ಕಡಲ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಭಾರತ ಆತ್ಮನಿರ್ಭರತೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಗೋವಾದಲ್ಲಿ ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ (GSL) ನಿರ್ಮಿಸಿರುವ ಎರಡು ಮಾಲಿನ್ಯ ನಿಯಂತ್ರಣ ಹಡಗುಗಳಲ್ಲಿ ಮೊದಲನೆಯದಾದ ಭಾರತೀಯ ಕೋಸ್ಟ್ ಗಾರ್ಡ್ ಹಡಗು (ICGS) ‘ಸಮುದ್ರ ಪ್ರತಾಪ್’ ಅನ್ನು ಅಧಿಕೃತವಾಗಿ ಕಾರ್ಯರೂಪಕ್ಕೆ ತಂದರು.

ಇದನ್ನೂ ಓದಿ:  ಸಚಿವ ವಿ.ಸೋಮಣ್ಣ ಮೇಲೆ ಚೇರ್ ತೂರಾಟ

ಮಾಲಿನ್ಯ ನಿಯಂತ್ರಣ ಹಡಗು: ಸ್ಥಳೀಯವಾಗಿ ತಯಾರಿಸಲಾದ ಸಾಮಗ್ರಿಗಳನ್ನು ಒಳಗೊಂಡಿರುವ ಐಸಿಜಿಎಸ್ ಸಮುದ್ರ ಪ್ರತಾಪ್, ಭಾರತದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ದೇಶೀಯವಾಗಿ ವಿನ್ಯಾಸಗೊಳಿಸಲಾದ ಮಾಲಿನ್ಯ ನಿಯಂತ್ರಣ ಹಡಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಲ್ಲದೆ, ಇದು ಭಾರತೀಯ ಕೋಸ್ಟ್ ಗಾರ್ಡ್ ನೌಕಾಪಡೆಯಲ್ಲಿಯೇ ಇದುವರೆಗೆ ಸೇವೆಗೆ ಸೇರ್ಪಡೆಯಾದ ಅತಿದೊಡ್ಡ ಹಡಗು ಆಗಿದೆ.

ಈ ಹಡಗು ಸೇರ್ಪಡೆಯಿಂದ ಮಾಲಿನ್ಯ ನಿಯಂತ್ರಣ, ಅಗ್ನಿಶಾಮಕ ಕಾರ್ಯಾಚರಣೆ, ಕಡಲ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ಕ್ಷೇತ್ರಗಳಲ್ಲಿ ಭಾರತೀಯ ಕೋಸ್ಟ್ ಗಾರ್ಡ್‌ನ ಕಾರ್ಯಾಚರಣಾ ಸಾಮರ್ಥ್ಯವು ಗಣನೀಯವಾಗಿ ವೃದ್ಧಿಯಾಗಲಿದೆ. ಭಾರತದ ವಿಶಾಲ ಸಮುದ್ರ ವಲಯಗಳಲ್ಲಿ ವಿಸ್ತೃತ ಕಣ್ಗಾವಲು, ತ್ವರಿತ ಪ್ರತಿಕ್ರಿಯೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಣಾ ಕಾರ್ಯಾಚರಣೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಇದು ಸಹಕಾರಿಯಾಗಲಿದೆ.

ಇದನ್ನೂ ಓದಿ:  ಬೀದರ್‌: KDP ಸಭೆಯಲ್ಲೇ ಕೈ ಕೈ ಮಿಲಾಯಿಸಿದ ಮುಖಂಡರು

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಐಸಿಜಿಎಸ್ ಸಮುದ್ರ ಪ್ರತಾಪ್ ಭಾರತದ ಪ್ರಬುದ್ಧ ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಯ ಪ್ರತಿಬಿಂಬವಾಗಿದೆ. ಸಂಕೀರ್ಣ ಉತ್ಪಾದನಾ ಸವಾಲುಗಳನ್ನು ದೇಶವೇ ನಿಭಾಯಿಸುವ ಸಾಮರ್ಥ್ಯವನ್ನು ಇದು ತೋರಿಸುತ್ತದೆ. ಭವಿಷ್ಯದಲ್ಲಿ ಹಡಗು ನಿರ್ಮಾಣದಲ್ಲಿ ಸ್ಥಳೀಯ ಅಂಶವನ್ನು 90 ಶೇಕಡಕ್ಕೆ ಹೆಚ್ಚಿಸಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ” ಎಂದು ಹೇಳಿದರು.

ಮಾಲಿನ್ಯ ನಿಯಂತ್ರಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಹಡಗು, ಅದಕ್ಕಷ್ಟೇ ಸೀಮಿತವಾಗದೇ ಬಹು ಸಾಮರ್ಥ್ಯಗಳನ್ನು ಒಂದೇ ವೇದಿಕೆಯಲ್ಲಿ ಹೊಂದಿರುವುದರಿಂದ ಕರಾವಳಿ ಗಸ್ತು, ಕಡಲ ಭದ್ರತೆ ಮತ್ತು ತುರ್ತು ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು. ಇದು ಇಂದಿನ ಕಡಲ ಸವಾಲುಗಳನ್ನು ಎದುರಿಸಲು ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ಅಳವಡಿಸಿಕೊಂಡ ಆಧುನಿಕ ಹಾಗೂ ನವೀನ ತಂತ್ರಜ್ಞಾನದ ಫಲಿತಾಂಶವಾಗಿದೆ ಎಂದು ಅವರು ಶ್ಲಾಘಿಸಿದರು.

ಇದನ್ನೂ ಓದಿ:  ಬಜೆಟ್ ನಂತರ ಅಧಿಕಾರ ಹಂಚಿಕೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಸಮುದ್ರ ಮಾಲಿನ್ಯ ನಿಯಂತ್ರಣದಿಂದ ಹಿಡಿದು ಕರಾವಳಿ ಸ್ವಚ್ಛತೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ, ಕಡಲ ಕಾನೂನು ಜಾರಿವರೆಗಿನ ಬಹುಆಯಾಮದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಭಾರತೀಯ ಕೋಸ್ಟ್ ಗಾರ್ಡ್ ಅನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. ಭಾರತದ ಕಡಲ ಗಡಿಗಳತ್ತ ದುಷ್ಟ ದೃಷ್ಟಿಯಿಂದ ನೋಡುವವರು ಅಥವಾ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ, ಅವರಿಗೆ ದೃಢ ಮತ್ತು ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಈ ನೌಕೆಯ ಕಾರ್ಯಾರಂಭ ನೀಡುತ್ತದೆ ಎಂದು ಅವರು ಹೇಳಿದರು.

ಐಸಿಜಿಎಸ್ ಸಮುದ್ರ ಪ್ರತಾಪ್ ಸುಧಾರಿತ ಮಾಲಿನ್ಯ ಪತ್ತೆ ವ್ಯವಸ್ಥೆಗಳು, ವಿಶೇಷ ಮಾಲಿನ್ಯ ಪ್ರತಿಕ್ರಿಯೆ ದೋಣಿಗಳು ಹಾಗೂ ಅತ್ಯಾಧುನಿಕ ಅಗ್ನಿಶಾಮಕ ಸಾಮರ್ಥ್ಯಗಳನ್ನು ಹೊಂದಿದೆ. ಜೊತೆಗೆ ಹೆಲಿಕಾಪ್ಟರ್ ಹ್ಯಾಂಗರ್ ಮತ್ತು ವಾಯುಯಾನ ಬೆಂಬಲ ಸೌಲಭ್ಯಗಳನ್ನೂ ಒಳಗೊಂಡಿರುವುದರಿಂದ, ಹಡಗಿನ ವ್ಯಾಪ್ತಿ ಮತ್ತು ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಲಿದೆ. ಕಠಿಣ ಮತ್ತು ಒರಟಾದ ಸಮುದ್ರ ಪರಿಸ್ಥಿತಿಗಳಲ್ಲಿಯೂ ಸಹ ಈ ಹಡಗು ಸ್ಥಿರವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವನ್ನು ರಕ್ಷಣಾ ಸಚಿವರು ವ್ಯಕ್ತಪಡಿಸಿದರು.

Previous articleಭಕ್ತರ ಪ್ರೀತಿ, ಸೇವೆಗೆ ಕಣ್ಣೀರಾದ ಗವಿಸಿದ್ಧೇಶ್ವರ ಸ್ವಾಮೀಜಿ