Home Advertisement
Home ಸುದ್ದಿ ದೇಶ ಐಎಎಸ್‌ ಅಳಿಯನ ಹೈಲೆವಲ್‌ ಡ್ರಾಮಾ…! ಮದುವೆ ಬಳಿಕ ನಡೆದಿದ್ದೇನು?

ಐಎಎಸ್‌ ಅಳಿಯನ ಹೈಲೆವಲ್‌ ಡ್ರಾಮಾ…! ಮದುವೆ ಬಳಿಕ ನಡೆದಿದ್ದೇನು?

0
160

ಅಳಿಯ ಅತ್ಯುನ್ನತ ಹುದ್ದೆಯಲ್ಲಿದ್ದಾನೆ. ಮಗಳು ಒಳ್ಳೆಯ ಮನೆತನ ಸೇರಿದ್ದಾಳೆ. ಆಕೆಗೆ ಉತ್ತಮ ಭವಿಷ್ಯವಿದೆ, ಮುಂದಿನ ಜೀವನ ಅತ್ಯಂತ ಉಲ್ಲಾಸದಾಯಕವಾಗಿರುತ್ತೆ ಎಂದೆಲ್ಲಾ ಕನಸು ಕಂಡು ಅದ್ದೂರಿಯಾಗಿ ಮದುವೆ ಮಾಡಿದ್ದ ಪಾಲಕರು ಸದ್ಯ ಕಂಗಾಲಾಗಿದ್ದಾರೆ.

ಐಎಎಸ್‌ ಆಫೀಸರ್‌ ಎಂದು ಹೇಳಿ ಯುವತಿಯ ಕುಟುಂಬದಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಯುವತಿಯನ್ನು ಮದುವೆಯಾಗಿ ವ್ಯಕ್ತಿಯೊಬ್ಬ ಪರಾರಿಯಾದ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದಿದೆ.

ಇಟಾವಾ ಮೂಲದ ಪ್ರೀತಮ್ ಕುಮಾರ್ ನಿಶಾದ್ ಎಂಬಾತ ಮಾಣಿಕ್‌ಪುರದಲ್ಲಿ ನಿಯೋಜನೆಗೊಂಡಿರುವ ಐಎಎಸ್‌ ಅಧಿಕಾರಿ ಎಂದು ಹೇಳಿಕೊಂಡು ಯುವತಿಯ ಕುಟುಂಬವನ್ನು ನಂಬಿಸಿದ್ದಾನೆ.

ಇದಕ್ಕೆ ತಕ್ಕಂತೆ ರಾಜಕೀಯ ನಾಯಕರೊಂದಿಗೆ ತರುವಂತಹ ನಕಲಿ ಫೋಟೋಗಳನ್ನು ಮತ್ತು ನಕಲಿ ಸಂದರ್ಶನಗಳ ವಿಡಿಯೋಗಳನ್ನು ಸೃಷ್ಟಿ ಮಾಡಿ ಯುವತಿಯ ಕುಟುಂಬದವರಿಗೆ ಕಳಿಸಿ ವಿಶ್ವಾಸ ಮೂಡಿಸಿದ್ದಾನೆ.

ಮದುವೆಗೆ ಮೊದಲು ಹಣದ ಬೇಡಿಕೆ: ನಿಶ್ಚಿತಾರ್ಥಕ್ಕೆ ಮೂರು ದಿನ ಬಾಕಿ ಇರುವಾಗಲೇ, ಮದುವೆ ಖರ್ಚಿನ ಹೆಸರಿನಲ್ಲಿ ಪ್ರೀತಮ್ 15 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಆಗ ನಿಶ್ಚಿತಾರ್ಥದ ದಿನ 10 ಲಕ್ಷ ರೂಪಾಯಿ, ಮದುವೆಯ ವೇಳೆ 5 ಲಕ್ಷ ರೂ. ಹಣವನ್ನು ಯುವತಿಯ ಕುಟುಂಬದವರು ಈತನಿಗೆ ನೀಡಿದ್ದಾರೆ

ಪ್ರೀತಮಗೆ 15 ಲಕ್ಷ ನೀಡಿದ್ದಲ್ಲದೇ, ಅದ್ದೂರಿ ಮದುವೆಗಾಗಿ 15 ಲಕ್ಷ ರೂಪಾಯಿ ಸೇರಿ ಒಟ್ಟು 30 ಲಕ್ಷ ಹಣವನ್ನು ಖರ್ಚು ಮಾಡಿ ಮದುವೆ ಮಾಡಿದ್ದ ಕುಟುಂಬ ಈಗ ಮೋಸಗಾರನಿಗೆ ಕೊಟ್ಟು ಮಗಳನ್ನು ಮದುವೆ ಮಾಡಿದೆನಲ್ಲ ಎಂದು ಕಣ್ಣೀರು ಹಾಕುತ್ತಿದೆ.

2026 ಮಾರ್ಚ್ 11ರಂದು ಗೊರಖಪುರದಲ್ಲಿ ಮದುವೆ ನಡೆದಿತ್ತು. ಮದುವೆಯ ಬಳಿಕ ಯುವತಿ ಗಂಡನ ಮನೆಗೆ ಹೋದಾಗ ಅದು ಕೇವಲ ಒಂದು ಕೊಠಡಿಯ ಮನೆ ಎಂಬುದು ಗೊತ್ತಾಯಿತು. ಈ ಬಗ್ಗೆ ಕೇಳಿದಾಗ ಆತ ತಾತ್ಕಾಲಿಕ ಎಂದು ಹೇಳಿ ತಪ್ಪಿಸಿಕೊಂಡನು.

ಯುವತಿಗೆ ಅನುಮಾನ ಮೂಡಿದ ನಂತರ ತಂದೆ-ತಾಯಿಗೆ ಮಾಹಿತಿ ನೀಡಿದ್ದಾಳು. ಇದೇ ವೇಳೆ, ಆರೋಪಿ ಸಂಪರ್ಕಕ್ಕೆ ಸಿಗದೇ ಪರಾರಿಯಾಗಿದ್ದನು. ಬಳಿಕ ತನಿಖೆಯಲ್ಲಿ ಆತ ಐಎಎಸ್ ಅಧಿಕಾರಿ ಅಲ್ಲ, ಮೋಸಗಾರ ಎಂದು ಬಹಿರಂಗವಾಗಿದೆ.

ಯುವತಿ ಹೇಳುವಂತೆ, ಮದುವೆಯ ನಂತರ ಆತನ ಉದ್ದೇಶ ಆಕೆಯನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ಮಾರಾಟ ಮಾಡುವುದಾಗಿತ್ತು. ಇದರಿಂದ ದೊಡ್ಡ ಮಾನವ ಕಳ್ಳಸಾಗಣೆ ಜಾಲದ ಸಂಪರ್ಕವಿರುವ ಸಾಧ್ಯತೆ ವ್ಯಕ್ತವಾಗಿದೆ.

ಸದ್ಯ ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮೋಸ, ವೇಷಧಾರಣೆ ಹಾಗೂ ಮಾನವ ಕಳ್ಳಸಾಗಣೆ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.