ಫಾಸ್ಟ್ಯಾಗ್ ಬಳಕೆ ಕಡ್ಡಾಯದತ್ತ ಕೇಂದ್ರದ ಹೆಜ್ಜೆ –
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಗದು ಪಾವತಿಗಳನ್ನು ಕಡಿಮೆ ಮಾಡಿ ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ (FASTag) ಕಡ್ಡಾಯವಾಗಿರುವಾಗ, ಅದರ ಬಳಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಹೊಸ ನಿಯಮ ಹೊರಬಂದಿದೆ.
ಹೊಸ ನಿಯಮದ ಸಾರಾಂಶ: ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮ, 2008ಕ್ಕೆ ಭಾರತ ಸರ್ಕಾರ ತಿದ್ದುಪಡಿ ಮಾಡಿದೆ. ಇದರ ಪ್ರಕಾರ ವಾಹನಗಳು FASTag ಇಲ್ಲದೆ ಟೋಲ್ ಪ್ಲಾಜಾಗೆ ಪ್ರವೇಶಿಸುವ ವಾಹನಗಳು ನಗದು ಪಾವತಿಸಿದರೆ ದ್ವಿಗುಣ ಶುಲ್ಕ (2 ಪಟ್ಟು) ವಿಧಿಸಲಾಗುತ್ತದೆ. ಆದರೆ, UPI ಮೂಲಕ ಪಾವತಿಸಿದರೆ, ಆ ವಾಹನದ ಶ್ರೇಣಿಗೆ ಅನ್ವಯವಾಗುವ ಸಾಮಾನ್ಯ ಶುಲ್ಕದ 1.25 ಪಟ್ಟು ಮಾತ್ರ ವಿಧಿಸಲಾಗುತ್ತದೆ.
ಉದಾಹರಣೆ: ಒಂದು ಕಾರಿಗೆ ಸಾಮಾನ್ಯವಾಗಿ ₹100 ಟೋಲ್ ಶುಲ್ಕ ಅನ್ವಯಿಸುತ್ತಿದ್ದರೆ. FASTag ಮೂಲಕ ಪಾವತಿಸಿದರೆ: ₹100 ನಗದು ರೂಪದಲ್ಲಿ ಪಾವತಿಸಿದರೆ: ₹200 ಹಾಗೂ UPI ಮೂಲಕ ಪಾವತಿಸಿದರೆ: ₹125 ಆಗಿರುತ್ತದೆ
ಹೊಸ ನಿಯಮ ಜಾರಿಯಾಗುವ ದಿನಾಂಕ: ಈ ತಿದ್ದುಪಡಿ ನವೆಂಬರ್ 15, 2025ರಿಂದ ದೇಶಾದ್ಯಂತ ಜಾರಿಗೆ ಬರುತ್ತದೆ.
ಸರ್ಕಾರದ ಉದ್ದೇಶ: ಈ ನಿರ್ಧಾರದಿಂದಾಗಿ ಟೋಲ್ ಸಂಗ್ರಹದಲ್ಲಿ ಪಾರದರ್ಶಕತೆ ಹೆಚ್ಚುವುದು, ಟೋಲ್‌ಗಳಲ್ಲಿ ನಗದು ಬಳಕೆ ಕಡಿಮೆಯಾಗುವುದು, ಹಾಗೂ ವಾಹನ ಸವಾರರ ಪ್ರಯಾಣದ ವೇಗ ಮತ್ತು ಸುಲಭತೆ ಹೆಚ್ಚುವುದು ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಈ ತಿದ್ದುಪಡಿ ಪ್ರಕಟಿಸಿದೆ. ಸಚಿವಾಲಯದ ಪ್ರಕಾರ, “ನಗದು ಪಾವತಿಗಳು ಟೋಲ್ ಪ್ಲಾಜಾಗಳಲ್ಲಿ ಸಂಚಾರದ ತೊಂದರೆ ಉಂಟುಮಾಡುತ್ತವೆ. FASTag ಮತ್ತು ಡಿಜಿಟಲ್ ಪಾವತಿ ಬಳಕೆ ಹೆಚ್ಚಾದರೆ, ಸಾಲುಗಳು ಕಡಿಮೆಯಾಗುತ್ತವೆ ಮತ್ತು ಸಮಯ ಉಳಿತಾಯವಾಗುತ್ತದೆ” ಎಂದು ಹೇಳಲಾಗಿದೆ.
ಪ್ರಸ್ತುತ ಸ್ಥಿತಿ: 2025ರ ಅಂಕಿ ಅಂಶಗಳ ಪ್ರಕಾರ, ದೇಶದ 97% ಕ್ಕಿಂತ ಹೆಚ್ಚು ಟೋಲ್ ಪಾವತಿಗಳು ಈಗಾಗಲೇ ಫಾಸ್ಟ್ಯಾಗ್ ಮೂಲಕವೇ ನಡೆಯುತ್ತಿವೆ. ಉಳಿದ 3% ನಗದು ಅಥವಾ ಇತರೆ ಪಾವತಿ ವಿಧಾನಗಳಲ್ಲಿ ಆಗುತ್ತಿವೆ. ಇವುಗಳನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ಈ ಕ್ರಮ ಸಹಾಯಕವಾಗಲಿದೆ.
ಸರ್ಕಾರದ ಈ ಹೆಜ್ಜೆಯು “ಕ್ಯಾಶ್‌ಲೆಸ್ ಇಂಡಿಯಾ”ಯ ಗುರಿಯತ್ತ ಮತ್ತೊಂದು ಪ್ರಮುಖ ಪ್ರಯತ್ನವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಸ್ಮಾರ್ಟ್‌ಫೋನ್/UPI ಸೇವೆ ಸಿಗದ ಪ್ರದೇಶಗಳಲ್ಲಿ ಪ್ರಯಾಣಿಸುವ ವಾಹನ ಮಾಲೀಕರು, ಫಾಸ್ಟ್ಯಾಗ್ ಸಕ್ರಿಯಗೊಳಿಸುವುದೇ ಉತ್ತಮ ಮಾರ್ಗ ಎಂದು ತಜ್ಞರು ಸಲಹೆ ನೀಡಿದ್ದಾರೆ.
vbto76