ನವದೆಹಲಿ: ವಾಯುಮಾಲಿನ್ಯದಿಂದ ತತ್ತರಿಸುತ್ತಿರುವ ದೆಹಲಿಯಲ್ಲಿ ಇನ್ನು ಮುಂದೆ ಬಿಎಸ್4 ಅನುಗುಣಕ್ಕಿಂತ ಹೆಚ್ಚಿನ ಇಂಜಿನ್ ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಡಿಸೆಂಬರ್ 18ರಿಂದಲೇ ಜಾರಿಗೆ ಬರುವಂತೆ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳಿಗೂ ಉಳಿದ ಬಿಎಸ್3 ಮತ್ತು ಇತರ ಇಂಜಿನ್ ಹೊಂದಿರುವ ವಾಹನಗಳ ಮೇಲೆ ನಿಷೇಧ ಹೇರಿದೆ.
ಈ ಹಿಂದೆ 10 ವರ್ಷಕ್ಕಿಂತ ಹಳೆಯ ಡೀಸೆಲ್ ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳ ಮೇಲೆ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಈಗ ಮಾರ್ಪಾಡು ಮಾಡಿದೆ.
ಮಾಲಿನ್ಯದ ಮೇಲೆ ನಿಗಾ ಇಟ್ಟಿರುವ ಸಂಸ್ಥೆ ವಾಯುಮಾಲಿನ್ಯ ಗುಣಮಟ್ಟ ನಿರ್ವಹಣಾ ಆಯೋಗ(ಸಿಎಕ್ಯುಎಂ) ಮನವಿ ಮೇರೆಗೆ ಕೋರ್ಟ್ ಈ ಸ್ಪಷ್ಟೀಕರಣ ನೀಡಿದೆ. ರಾಜಧಾನಿ ಮಾಲಿನ್ಯದಿಂದ ಮುಸುಕಿಕೊಂಡಿದ್ದು, ಬಿಎಸ್3 ಮತ್ತು ಕಡಿಮೆ ದರ್ಜೆಯ ಇಂಜಿನ್ ಹೊಂದಿರುವ ವಾಹನಗಳ ಕೊಡುಗೆ ಇದರಲ್ಲಿ ಜಾಸ್ತಿ ಇದೆ ಎಂದು ಸಿಎಕ್ಯುಎಂ ತಿಳಿಸಿತ್ತು.
ಇದನ್ನೂ ಓದಿ: ತೀವ್ರ ವಿರೋಧದ ನಡುವೆಯೇ ದ್ವೇಷ ಭಾಷಣ ವಿಧೇಯಕ ಅಂಗೀಕಾರ
ರಾಜಧಾನಿಯಲ್ಲಿರುವ 2.88 ಕೋಟಿ ವಾಹನಗಳ ಪೈಕಿ ಶೇ. 93ರಷ್ಟು ವಾಹನಗಳು ಕಾರು ಮತ್ತು ದ್ವಿಚಕ್ರ ವಾಹನಗಳು. ಈ ಪೈಕಿ ಶೇ. 37ರಷ್ಟು ವಾಹನಗಳು ಬಿಎಸ್3 ಮತ್ತು ಅದಕ್ಕಿಂತ ಹಳೆಯ ಇಂಜಿನ್‌ಗಳನ್ನು ಹೊಂದಿವೆ. ಹೊಸ ವಾಹನಗಳಿಗೆ ಹೋಲಿಸಿದರೆ, ಈ ವಾಹನಗಳು 2.5 ರಿಂದ 31 ಪಟ್ಟು ಹೆಚ್ಚು ಮಾಲಿನ್ಯವನ್ನು ಬಿಡುಗಡೆ ಮಾಡುತ್ತಿದೆ. 6.25 ರಿಂದ 12 ಪಟ್ಟು ನೈಟ್ರೋಜನ್ ಆಕ್ಸೈಡ್ ಮತ್ತು 1.28 ರಿಂದ 5.4 ಪಟ್ಟು ಕಾರ್ಬನ್ ಮಾನಾಕ್ಸೈಡ್ ಈ ವಾಹನಗಳಿಂದ ಹೊರಹೊಮ್ಮುತ್ತಿವೆ ಎನ್ನುವ ಅಂಕಿ-ಅಂಶಗಳನ್ನು ಸಿಎಕ್ಯುಎಂ ನ್ಯಾಯಪೀಠಕ್ಕೆ ಸಲ್ಲಿಸಿತು.
ದೆಹಲಿಯಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರಗಳನ್ನು ಹೊಂದಿರದ ವಾಹನಗಳಿಗೆ ಇಂಧನ ವಿತರಿಸುವುದನ್ನು ಬಂದ್ ಮಾಡಿವೆ. ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ್‌ಪಿಆರ್) ಕ್ಯಾಮೆರಾಗಳು, ಪೆಟ್ರೋಲ್ ಪಂಪ್‌ಗಳಲ್ಲಿ ಧ್ವನಿ ಎಚ್ಚರಿಕೆ ವ್ಯವಸ್ಥೆಗಳು ಮತ್ತು ದೆಹಲಿ ಪೊಲೀಸ್ ಸಿಬ್ಬಂದಿಯ ಬೆಂಬಲವನ್ನು ಬಳಸಿಕೊಂಡು ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರನಲ್ಲಿ ಕರ್ನಾಟಕದ ಮೊದಲ Gen Z-themed ಅಂಚೆ ಕಚೇರಿ ಉದ್ಘಾಟನೆ
ಶೇ. 50 ನೌಕರರಿಗೆ ಇನ್ಮುಂದೆ ವರ್ಕ್‌ಫ್ರಮ್ ಹೋಂ: ವಾಯುಮಾಲಿನ್ಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಶೇ. 50ರಷ್ಟು ನೌಕರರಿಗೆ ವರ್ಕ್‌ಫ್ರಮ್ ಹೋಮ್ ಕಡ್ಡಾಯಗೊಳಿಸಿ ದೆಹಲಿ ಸರ್ಕಾರ ಆದೇಶಿಸಿದೆ. ಇದರೊಂದಿಗೆ ವಾಯುಮಾಲಿನ್ಯ ನಿಯಂತ್ರಣ ಸಲುವಾಗಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲ್ಯಾನ್ ಅಡಿಯಲ್ಲಿ ದೀರ್ಘಕಾಲದ ತನಕ ಯಾವುದೇ ನಿರ್ಮಾಣ ಚಟುವಟಿಕೆಗಳ ಕಾರ್ಯ ಕೈಗೊಳ್ಳದಂತೆ ಕಾರ್ಮಿಕರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇನ್ನು ಕಟ್ಟಡ ನಿರ್ಮಾಣ ನಿಷೇಧಿಸಿರುವದರಿಂದ ದಿನನಿತ್ಯದ ಜೀವನದ ಅಗತ್ಯತೆಗಳ ಪೂರೈಸಲು ನೋಂದಾಯಿತ ಕಾರ್ಮಿಕರಿಗೆ 10 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ.






















