ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಹೊಸ ಚಂಡಮಾರುತ ರೂಪುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಅದಕ್ಕೆ ‘ಮೊಂತಾ’ ಎಂದು ಹೆಸರು ನೀಡಲಾಗಿದೆ. ಈ ಚಂಡಮಾರುತವು ಆಂಧ್ರ ಕರಾವಳಿಯತ್ತ ಚಲಿಸುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆಯು ಹಲವು ರಾಜ್ಯಗಳಿಗೆ ಮುನ್ನೆಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅಕ್ಟೋಬರ್ 27ರ ವೇಳೆಗೆ ಈ ಚಂಡಮಾರುತ ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಐಎಂಡಿ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಅಕ್ಟೋಬರ್ 25ರಂದು ಆಗ್ನೇಯ ಭಾಗದಲ್ಲಿ ಒತ್ತಡ ಸೃಷ್ಟಿಯಾಗಲಿದ್ದು, ಅದು 26ರಂದು ಮತ್ತಷ್ಟು ತೀವ್ರಗೊಳ್ಳಲಿದೆ. ನಂತರ ‘ಮೊಂತಾ’ ಚಂಡಮಾರುತವು ವಾಯವ್ಯ ದಿಕ್ಕಿಗೆ ನಿಧಾನವಾಗಿ ಚಲಿಸುವ ಸಾಧ್ಯತೆಗಳಿವೆ.
ಚಂಡಮಾರುತದ ಪರಿಣಾಮವಾಗಿ ಮುಂದಿನ 2ರಿಂದ 3 ದಿನಗಳವರೆಗೆ ಚೆನ್ನೈ ಹಾಗೂ ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಅಲ್ಲದೆ ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿಯೂ ಅಕ್ಟೋಬರ್ 28ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಹವಾಮಾನ ತಜ್ಞರ ಪ್ರಕಾರ, ಈ ಚಂಡಮಾರುತವು ಬಂಗಾಳಕೊಲ್ಲಿಯ ಮಧ್ಯ ಭಾಗದಲ್ಲಿ ತೀವ್ರಗೊಂಡು, ಆಂಧ್ರಪ್ರದೇಶದ ಕರಾವಳಿಯತ್ತ ಚಲಿಸುವ ಸಾಧ್ಯತೆ ಇದೆ. ಮೀನುಗಾರರು ಹಾಗೂ ಕರಾವಳಿ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಸಮುದ್ರಕ್ಕೆ ತೆರಳದಂತೆ ಸಲಹೆ ನೀಡಲಾಗಿದೆ.
ಈ ಬಾರಿಯ ಚಂಡಮಾರುತಕ್ಕೆ ಅಂತರರಾಷ್ಟ್ರೀಯ ಹವಾಮಾನ ಸಮಿತಿಯ ಶಿಫಾರಸಿನಂತೆ ಥಾಯ್ಲೆಂಡ್‌ನಿಂದ ‘ಮೊಂತಾ’ (Montha) ಎಂಬ ಹೆಸರನ್ನು ನೀಡಲಾಗಿದೆ.
























