ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಚೀನಾ ʻಟಿಪ್ಸ್‌ʼ

0
7

ಭಾರತದ-ಅದರಲ್ಲೂ ರಾಜಧಾನಿ ದೆಹಲಿಯ ವಾಯುಮಾಲಿನ್ಯ ತಾರಕಕ್ಕೆ ಏರಿರುವ ವಿಷಯ ಜಗತ್ತಿಗೇ ಗೊತ್ತಿದೆ. ಈ ಗಂಭೀರ ಸಮಸ್ಯೆಗೆ ದೆಹಲಿ ಆಡಳಿತವೂ ತನ್ನ ಕೈಲಾದ ಪರಿಹಾರೋಪಾಯಗಳನ್ನು ಕೈಗೊಂಡರೂ ಪ್ರಯೋಜನವಾಗದೆ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆಯ ಚೀನಾ ಸಹ ಕಳವಳ ವ್ಯಕ್ತಪಡಿಸಿದ್ದು ದೆಹಲಿಯ ವಾಯುಮಾಲಿನ್ಯ ನಿಯಂತ್ರಿಸಲು ತನ್ನದೇ ಆದ ಕೆಲವು `ಟಿಪ್ಸ್’ಗಳನ್ನು ನೀಡಿದೆ. ಸಾಂಪ್ರದಾಯಿಕವಾಗಿ ಭಾರತದ ಶತ್ರು ರಾಷ್ಟ್ರವಾಗಿದ್ದರೂ ಈ ವಿಷಯದಲ್ಲಿ ಭಾರತದ ನೆರವಿಗೆ ಮುಂದಾಗಿದೆ. ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ವಕ್ತಾರರಾದ ಯು ಜಿಂಗ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.

ಹಿಂದೊಮ್ಮೆ ಚೀನಾ ಸಹ ಇಂತಹುದೇ ವಿಷಮ ಪರಿಸ್ಥಿತಿ ಎದುರಿಸಿ, ಅದರಿಂದ ಅದು ಪಾರಾಯಿತು ಎಂಬುದನ್ನು ವಿವರಿಸಿದ್ದಾರೆ. ವಾಯು ಮಾಲಿನ್ಯ ನಿಯಂತ್ರಣ ರಾತ್ರೋರಾತ್ರಿ ಆಗುವಂಥದ್ದಲ್ಲ; ಅದು ನಿಧಾನಗತಿಯ ಪ್ರಕ್ರಿಯೆಯಾಗಿದೆ. ಒಂದು ದಶಕದಷ್ಟು ಕಾಲ ತಾನು ಕೈಗೊಂಡ ಕ್ರಮಗಳ `ಅನುಭವ’ದ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಚೀನಾ ಭಾರತಕ್ಕೆ ಏನೇನು ಸಲಹೆ ನೀಡಿದೆ ಎಂಬುದರ ಒಂದು ಸಮಗ್ರ ಚಿತ್ರಣ ಇಲ್ಲಿದೆ:

ಚೀನಾ ಮತ್ತು ಭಾರತ ಮಾಲಿನ್ಯ ಪ್ರಮಾಣ ಹೇಗಿದೆ?: ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ನಡುವೆ ಹೋಲಿಸಿಕೆ ಮಾಡಿ ನೋಡಿದಾಗ ಚೀನಾದ ಸಾಫಲ್ಯ ಹಾಗೂ ಭಾರತದ ವೈಫಲ್ಯ ಎದ್ದು ಕಾಣುತ್ತದೆ. 1978ರಲ್ಲಿ ಚೀನಾ ಮಾರುಕಟ್ಟೆ ಮುಕ್ತವಾದ ನಂತರ, ಕೈಗಾರಿಕೆಗಳು ಬೆಳೆದು ಕಾರ್ಬನ್ ಸೂಸುವಿಕೆ ಅತಿಯಾಗಿತ್ತು. ನದಿಗಳು ಕೂಡ ಕಲುಷಿತಗೊಂಡಿದ್ದವು. 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ ವೇಳೆ ಮಾಲಿನ್ಯ ನಿಯಂತ್ರಣಕ್ಕೆ ವೇಗ ದೊರೆಯಿತು. 2013ರ ನಂತರ ತೀವ್ರ ಪ್ರಯತ್ನ ನಡೆಸಿತು. ಈಗ ಶೇ. 80ರಷ್ಟು ಪ್ರಗತಿ ಕಂಡುಬಂದಿದೆ. ಬೀಜಿಂಗ್‌ನ ವಾಯು ಗುಣಪಟ್ಟ ಸೂಚ್ಯಂಕ (ಎಕ್ಯೂಐ) 68 ಅಂದರೆ `ತೃಪ್ತಿಕರ’ವಾಗಿದೆ. ಇದೇ ವೇಳೆ ಭಾರತದ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವಿಂಗಡಣೆ ಪ್ರಕಾರ ದೆಹಲಿಯ ವಾಯ ಗುಣಮಟ್ಟ 447ಕ್ಕೆ ಏರಿ ಗಂಭೀರ ಎನಿಸಿಕೊಂಡಿದೆ.

ಇದನ್ನೂ ಓದಿ: ವಾಯುಮಾಲಿನ್ಯಕ್ಕೆ ತತ್ತರಿಸಿದ ದೆಹಲಿ: ಹಳೆಯ ಕಾರುಗಳಿಗೆ ನೋ ಎಂಟ್ರಿ

ಭಾರತ ಮತ್ತು ಚೀನಾ ಕಾನೂನು ಒಂದೇ ಆದರೂ ಫಲಿತಾಂಶ ಭಿನ್ನ: ಚೀನಾ ಮತ್ತು ಭಾರತದ ಪರಿಸರ ಕಾನೂನುಗಳಲ್ಲಿ ಅಂಥ ವ್ಯತ್ಯಾಸವೇನಿಲ್ಲ. ಎರಡೂ ದೇಶಗಳು 1980ರಲ್ಲಿ ಪರಿಸರ ಕಾನೂನುಗಳನ್ನು ಪರಿಚಯಿಸಿದವು. 2010ರ ಹೊತ್ತಿಗೆ ವಾಯುಗುಣಮಟ್ಟ ಕಾರ್ಯಕ್ರಮಗಳನ್ನು ಜಾರಿಗೆ ತಂದವು. ಆದರೆ ಚೀನಾ ಉತ್ತಮ ಫಲಿತಾಂಶ ತೋರಿಸಿದೆ. ಅದಕ್ಕೆ ಕಾರಣ ರಾಜಕೀಯ ಇಚ್ಛಾಶಕ್ತಿ ಮತ್ತು ಉತ್ತರದಾಯಿತ್ವ.

ಚೀನಾ ನೀಡಿರುವ ಸಲಹೆಗಳು

ಕ್ರಮ 1: ವಾಹನಗಳ ಹೊಗೆ ಉಗುಳುವಿಕೆ ನಿಯಂತ್ರಣಕ್ಕೆ:
ಅತ್ಯಂತ ಕಟ್ಟುನಿಟ್ಟಾಗಿ ನಿಯಮಾವಳಿಗಳನ್ನು ರೂಪಿಸಬೇಕು.

2ನೇ ಹಂತದಲ್ಲಿ ಹಳೆವಾಹನಗಳನ್ನು ನಿರ್ಮೂಲನೆ ಮಾಡಬೇಕು.

ವಾರಾಂತ್ಯಗಳಲ್ಲಿ ಕಾರುಗಳ ಓಡಾಟಕ್ಕೆ ನಿರ್ಬಂಧ ಹಾಕಬೇಕು.

ಲೈಸೆನ್ಸ್, ಸರಿ-ಬೆಸ ಸಂಖ್ಯೆಗಳ ಪ್ಲೇಟ್ ಆಧಾರಿತವಾಗಿ ಕಾರುಗಳ ಓಡಾಟವನ್ನು ನಿಯಂತ್ರಿಸಿ, ಅವುಗಳ ಸಂಚಾರ ತಗ್ಗಿಸಬೇಕು.

ಮೆಟ್ರೋ ಹಾಗೂ ಬಸ್‌ನಂತಹ ಸಾರ್ವಜನಿಕ ಸಾರಿಗೆಗೆ ಹೆಚ್ಚು ಒತ್ತು ನೀಡಬೇಕು.

ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಬೇಕು.

ಹೊಗೆ ನಿಯಂತ್ರಿಸುವ ವಿಷಯದಲ್ಲಿ ಚೀನಾದ ಪ್ರಾಂತ್ಯಗಳು ಯಶಸ್ಸು ಸಾಧಿಸಿದ್ದು, ಅವುಗಳ ಜೊತೆ ಸಹಯೋಗ ಹೊಂದಬಹುದು

ಕ್ರಮ 2: ಕೈಗಾರಿಕೋದ್ಯಮ ಪುನರಾಚನೆ

ಬೃಹತ್ ಕೈಗಾರಿಕೋದ್ಯಮಗಳನ್ನು ಸ್ಥಗಿತಗೊಳಿಸಬೇಕು ಅಥವಾ ಬೇರೆ ಕಡೆಗೆ ಸ್ಥಳಾಂತರಿಸುವುದು ಅನಿವಾರ್ಯವಾಗುತ್ತದೆ.

ಕೈಗಾರಿಕೆಗಳ ತೆಗೆದ ಜಾಗವನ್ನು ಉದ್ಯಾನವನ, ವಾಣಿಜ್ಯ ವಲಯ, ಸಾಂಸ್ಕೃತಿಕ ಅಥವಾ ತಂತ್ರಜ್ಞಾನ ಸ್ಥಳಗಳಾಗಿ ಪರಿವರ್ತಿಸಬೇಕು.

ಸಗಟು ಮಾರುಕಟ್ಟೆಗಳು, ಸರಕು ಸಾಗಣೆ ಕಟ್ಟೆಗಳು ಹಾಗೂ ಕೆಲವು ಶೈಕ್ಷಣಿಕ ಹಾಗೂ ವೈದ್ಯಕೀಯ ಸಂಸ್ಥೆಗಳನ್ನು ಸ್ಥಳಾಂತರಿಸಬೇಕು.

ಇಂತಹ ಸ್ಥಳಾಂತರಗಳನ್ನು ಪ್ರಾದೇಶಿಕ ಸಮಗ್ರ ಸಹಯೋಗದೊಂದಿಗೆ ನಡೆಸಬೇಕು.

Previous articleಪ್ರತಿಭಟನೆ ನಡುವೆಯೇ ಲೋಕಸಭೆಯಲ್ಲಿ ‘VB-G RAM G’ ಮಸೂದೆ ಅಂಗೀಕಾರ