ನವದೆಹಲಿ: ಎಲಾನ್ ಮಸ್ಕ್ ನೇತೃತ್ವದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (X) ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮದ ಸೂಚನೆ ನೀಡಿದೆ. ಎಕ್ಸ್ ವೇದಿಕೆಯಲ್ಲಿ ಲಭ್ಯವಿರುವ ಅದರ AI ಆಧಾರಿತ ಅಪ್ಲಿಕೇಶನ್ ‘ಗ್ರೋಕ್ (Grok AI)’ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಹಾಗೂ ಕಾನೂನುಬಾಹಿರ ವಿಷಯಗಳು ಹಂಚಲ್ಪಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಂತಹ ಎಲ್ಲಾ ವಿಷಯಗಳನ್ನು 72 ಗಂಟೆಗಳೊಳಗೆ ತಕ್ಷಣ ಡಿಲೀಟ್ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದೆ.
ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳದಿದ್ದರೆ, ಕಾನೂನಿನಡಿಯಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿ ವಿಧಿಸಲಾದ ಶಾಸನಬದ್ಧ ಜವಾಬ್ದಾರಿಗಳನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಕ್ಸ್‌ನ ಭಾರತದ ಕಾರ್ಯಾಚರಣೆಗಳ ಮುಖ್ಯ ಅಧಿಕಾರಿಗೆ ಅಧಿಕೃತ ನೋಟಿಸ್ ಜಾರಿಗೊಳಿಸಿದೆ.
ಇದನ್ನೂ ಓದಿ: ಧಾರವಾಡದಲ್ಲಿ ಶೀಘ್ರವೇ ಆಧಾರ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆ
ನೋಟಿಸ್‌ನಲ್ಲಿ, ‘ಗ್ರೋಕ್’ ನಂತಹ AI ಆಧಾರಿತ ಸೇವೆಗಳ ದುರುಪಯೋಗದ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಹಾಗೂ ಲೈಂಗಿಕ ಸ್ವರೂಪದ ವಿಷಯಗಳನ್ನು ಹೋಸ್ಟ್ ಮಾಡುವುದು, ರಚಿಸುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು, ಹಂಚಿಕೊಳ್ಳುವುದು ಅಥವಾ ಅಪ್‌ಲೋಡ್ ಮಾಡುವುದನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಚಿವಾಲಯ ನಿರ್ದೇಶನ ನೀಡಿದೆ. ಈ ಸಂಬಂಧ ಕೈಗೊಂಡ ಕ್ರಮಗಳ ವಿವರವಾದ ವರದಿಯನ್ನು ಸಲ್ಲಿಸುವಂತೆ ಎಕ್ಸ್‌ಗೆ ಸೂಚಿಸಲಾಗಿದೆ.
ಸಚಿವಾಲಯದ ಪತ್ರದಲ್ಲಿ, “ನೀವು ಅಭಿವೃದ್ಧಿಪಡಿಸಿ ಎಕ್ಸ್ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಿರುವ ‘Grok AI’ ಸೇವೆಯನ್ನು ಕೆಲ ಬಳಕೆದಾರರು ದುರುಪಯೋಗಪಡಿಸಿಕೊಂಡು, ಮಹಿಳೆಯರ ಅಶ್ಲೀಲ ಚಿತ್ರಗಳು ಅಥವಾ ವೀಡಿಯೊಗಳನ್ನು ಅವಹೇಳನಕಾರಿ ಹಾಗೂ ಅಸಭ್ಯ ರೀತಿಯಲ್ಲಿ ಸೃಷ್ಟಿಸಲು, ಹೋಸ್ಟ್ ಮಾಡಲು, ಪ್ರಕಟಿಸಲು ಅಥವಾ ಹಂಚಿಕೊಳ್ಳಲು ನಕಲಿ ಖಾತೆಗಳನ್ನು ರಚಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಗಂಭೀರ ವಿಷಯದ ಕುರಿತು ತಕ್ಷಣ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ರೆಡ್ಡಿ ಬಣಗಳ ಮಧ್ಯೆ ಘರ್ಷಣೆ: ಬಳ್ಳಾರಿ ಎಸ್ಪಿ ತಲೆದಂಡ
AI ತಂತ್ರಜ್ಞಾನಗಳ ಬಳಕೆಯಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಕಾನೂನು ಪಾಲನೆ ಅತ್ಯಂತ ಅಗತ್ಯವಾಗಿದ್ದು, ಡಿಜಿಟಲ್ ವೇದಿಕೆಗಳು ಬಳಕೆದಾರರ ಸುರಕ್ಷತೆ, ಮಹಿಳೆಯರ ಗೌರವ ಮತ್ತು ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಸರ್ಕಾರ ಈ ಮೂಲಕ ಪುನರುಚ್ಚರಿಸಿದೆ. ಈ ಬೆಳವಣಿಗೆ ಎಕ್ಸ್ ಮತ್ತು ಅದರ AI ಸೇವೆಗಳ ಮೇಲೆ ಸರ್ಕಾರದ ನಿಗಾವನ್ನು ಇನ್ನಷ್ಟು ಗಟ್ಟಿಗೊಳಿಸುವ ಸೂಚನೆಯಾಗಿದೆ.






















