Home Advertisement
Home ಸುದ್ದಿ ದೇಶ ದೇಶದಲ್ಲಿ ಮತ್ತೊಂದು ದುರಂತ.. ಶೀತ್ಲಾ ಮಾತಾ ದರ್ಶನಕ್ಕೆ ಹೋದ ಭಕ್ತರ ಕಾಲ್ತುಳಿತ; 9 ಮಂದಿಯ ದಾರುಣ...

ದೇಶದಲ್ಲಿ ಮತ್ತೊಂದು ದುರಂತ.. ಶೀತ್ಲಾ ಮಾತಾ ದರ್ಶನಕ್ಕೆ ಹೋದ ಭಕ್ತರ ಕಾಲ್ತುಳಿತ; 9 ಮಂದಿಯ ದಾರುಣ ಸಾವು

0
54

ಚೈತ್ರ ಮಾಸದ ಕೊನೆಯ ಮಂಗಳವಾರದಂದು (ಮಾರ್ಚ್ 31, 2026) ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ಮಾತಾ ದೇವಸ್ಥಾನಕ್ಕೆ ದರ್ಶನ ಮತ್ತು ಪೂಜೆಗಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು.ದೇವಾಲಯದಲ್ಲಿ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಗಳು ವಿರಳವಾಗಿದ್ದವು.
ದರ್ಶನ ಪಡೆಯುವ ಆತುರದಲ್ಲಿ, ಕೆಲವು ಭಕ್ತರು ಸರತಿ ಸಾಲನ್ನು ಮುರಿದು ಒಬ್ಬರ ಮೇಲೊಬ್ಬರು ಹತ್ತಲು ಪ್ರಾರಂಭಿಸಿದರು. ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು, ತೀವ್ರ ಜನದಟ್ಟಣೆ ಮತ್ತು ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ದುರಂತದ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ, ಸ್ಥಳೀಯ ಗ್ರಾಮಸ್ಥರೊಂದಿಗೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪೊಲೀಸರು ಒಂದು 12ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆಯ ನಂತರ, ಪ್ರತ್ಯಕ್ಷದರ್ಶಿಗಳು ಈ ಘಟನೆಗೆ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಚೈತ್ರ ಮಾಸದಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾದ ಶೀತ್ಲಾ ದೇವಸ್ಥಾನದಲ್ಲಿ ಪೊಲೀಸರ ಕೊರತೆಯೂ ಪ್ರಶ್ನಾರ್ಹವಾಗಿದೆ.

ಇನ್ನು ರಾಜ್ಯ ಸರ್ಕಾರವು ಸಂತ್ರಸ್ತರ ಕುಟುಂಬಗಳಿಗೆ ₹6 ಲಕ್ಷ ಪರಿಹಾರವನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ಪರಿಹಾರವನ್ನು ಘೋಷಿಸಿದ್ದಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತವು ಈಗ ದೇವಾಲಯವನ್ನು ಮುಚ್ಚಿದೆ. ನಳಂದ ಮತ್ತು ನೆರೆಯ ಜಿಲ್ಲೆಗಳ ಭಕ್ತರು ಪ್ರತಿ ಮಂಗಳವಾರ ಪ್ರಾರ್ಥನೆ ಸಲ್ಲಿಸಲು ಮಾಘಡ ಗ್ರಾಮದಲ್ಲಿರುವ ದೇವಾಲಯದಲ್ಲಿ ಸೇರುತ್ತಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಘಟನೆಯ ಬಗ್ಗೆ ತನಿಖೆ ಆರಂಭಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಬಿಹಾರ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಸಂತಾಪ ಸೂಚಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.