Home Advertisement
Home ಸುದ್ದಿ ದೇಶ LPG ಕೊರತೆ ಬಳಿಕ ಮತ್ತೊಂದು ಶಾಕ್: ಪೆಟ್ರೋಲ್ ದುಬಾರಿ

LPG ಕೊರತೆ ಬಳಿಕ ಮತ್ತೊಂದು ಶಾಕ್: ಪೆಟ್ರೋಲ್ ದುಬಾರಿ

0
55

ಬೆಂಗಳೂರು: ಅಮೆರಿಕ-ಇಸ್ರೇಲ್ ಮತ್ತು ಇರಾನ್​ ಯುದ್ಧ ಭಾರತೀಯರ ಮೇಲೂ ಪರಿಣಾಮ ಬೀರುತ್ತಿದೆ. ಯುದ್ಧ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದೆ. ಆದರೆ ಯುದ್ಧದ ಎಫೆಕ್ಟ್‌ ನಮ್ಮಲ್ಲಿ ಆಗುತ್ತಿರುವುದು ಜನರನ್ನು ಸಂಕಷ್ಟಕ್ಕೆ ತಂದೊಡ್ಡುತ್ತಿದೆ.

ದೇಶಾದ್ಯಂತ ಈಗಾಗಲೇ ಉಂಟಾಗಿರುವ ಎಲ್‌ಪಿಜಿ ಗ್ಯಾಸ್‌ ಅಭಾವದಿಂದ ತತ್ತರಿಸಿರುವ ಜನತೆಗೆ ಈಗ ಪ್ರಿಮಿಯಂ ಪೆಟ್ರೋಲ್‌ ಬೆಲೆ ಏರಿಕೆಯ ಬಿಗ್‌ ಬಿಸಿ ತಟ್ಟಿದೆ. ಆದರೆ ಸಾಮಾನ್ಯ ಪೆಟ್ರೋಲ್, ಡೀಸೆಲ್ ದರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.

ದರ ಏರಿಕೆಯು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್‌)ನ ಸ್ಪೀಡ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್‌)ನ ಪವರ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ (ಐಒಸಿಎಲ್‌)ನ ಎಕ್ಸ್‌ಪಿ 95 ಸೇರಿದಂತೆ ಹೆಚ್ಚಿನ ಕಾರ್ಯಕ್ಷಮತೆಯ ಇಂಧನ ರೂಪಾಂತರಗಳಿಗೆ ಮಾತ್ರವೇ ಅನ್ವಯಿಸುತ್ತವೆ.

ಹಾರ್ಮುಜ್ ಜಲಸಂಧಿಯ ಸುತ್ತಲಿನ ಅಡೆತಡೆಗಳಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ಏರಿಳಿತ ಕಂಡುಬರುತ್ತಿದೆ. ಕಚ್ಚಾ ತೈಲದ ಸಾಗಣೆ ದರ ಬ್ಯಾರೆಲ್‌ಗೆ 100 ಡಾಲರ್‌ಕ್ಕಿಂತ ಹೆಚ್ಚಳವಾಗಿದೆ. ಇದರಿಂದಾಗಿ ಪ್ರೀಮಿಯಂ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 2.09 ರಿಂದ 2.35 ರೂ. ವರೆಗೆ ಹೆಚ್ಚಳ ಕಂಡುಬಂದಿದೆ.

ಮಧ್ಯಪ್ರಾಚ್ಯವು ವಿಶ್ವದ ಪ್ರಮುಖ ಕಚ್ಚಾ ತೈಲ ಪೂರೈಕೆ ಕೇಂದ್ರವಾಗಿರುವುದರಿಂದ, ಅಲ್ಲಿ ಉದ್ವಿಗ್ನತೆ ಹೆಚ್ಚಾದರೆ ತೈಲದ ಬೆಲೆಗಳಲ್ಲಿ ಅಸ್ಥಿರತೆ ಉಂಟಾಗುವುದು ಸಾಮಾನ್ಯ.

ಇದೇ ರೀತಿಯಲ್ಲಿ ಅಮೆರಿಕ, ಇಸ್ರೇಲ್ – ಇರಾನ್‌ ಯುದ್ಧವು ತಿಂಗಳುಗಳ ಕಾಲ ಮುಂದುವರಿದರೆ, ತೈಲ ಸಾಗಣೆ ಕಷ್ಟವಾಗಲಿದೆ. ಜತೆಗೆ ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಬದಲಾವಣೆಯಾಗಲಿದೆ. ಆದರೆ ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ನೇರವಾಗಿ ಯುದ್ಧದ ಪರಿಣಾಮವೇ ಅಲ್ಲ. ಇದರ ಹಿಂದೆ ಕೆಲವು ಪ್ರಮುಖ ಕಾರಣಗಳಿವೆ. ಹೀಗಾಗಿ ಮುಂದಿನ ದಿನದಲ್ಲಿ ಸಾಮಾನ್ಯ ಡೀಸೆಲ್, ಪೆಟ್ರೋಲ್ ದರ ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನುವುದು ತಜ್ಞರ ಅಭಿಪ್ರಾಯ.