Home Advertisement
Home ಸುದ್ದಿ ದೇಶ ಕರ್ನಾಟಕದ ಬಳಿಕ ಆಂಧ್ರದಲ್ಲೂ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್

ಕರ್ನಾಟಕದ ಬಳಿಕ ಆಂಧ್ರದಲ್ಲೂ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್

0
108

ಮಕ್ಕಳ ಮೊಬೈಲ್ ವ್ಯಸನಕ್ಕೆ ಬ್ರೇಕ್: 13 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣ ನಿಷೇಧ

ಅಮರಾವತಿ: ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಜಾಲತಾಣಗಳು ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ ಆಂದ್ರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ 13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶುಕ್ರವಾರ ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದರು.

ಈ ಘೋಷಣೆ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನ, ಆನ್‌ಲೈನ್ ಅಹಿತಕರ ವಿಷಯಗಳು ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಬಂದಿದೆ.

90 ದಿನಗಳಲ್ಲಿ ನಿಯಮ ಜಾರಿ: ಈ ಹೊಸ ನೀತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಿನ 90 ದಿನಗಳ ಕಾಲಮಿತಿ ನಿಗದಿಪಡಿಸಿದೆ. ಈ ಅವಧಿಯಲ್ಲಿ ನಿಯಮಾವಳಿ ರೂಪಿಸುವುದು, ತಾಂತ್ರಿಕ ವ್ಯವಸ್ಥೆಗಳನ್ನು ರೂಪಿಸುವುದು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಂತ್ರಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.

ಸರ್ಕಾರದ ಪ್ರಕಾರ, ಮಕ್ಕಳನ್ನು ಸಾಮಾಜಿಕ ಜಾಲತಾಣಗಳ ವ್ಯಸನದಿಂದ ಮತ್ತು ಅಸಮರ್ಪಕ ವಿಷಯಗಳಿಂದ ರಕ್ಷಿಸುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ.

16 ವರ್ಷ ವರೆಗೆ ವಯೋಮಿತಿ ವಿಸ್ತರಣೆ ಚಿಂತನೆ : ಪ್ರಸ್ತುತ 13 ವರ್ಷದೊಳಗಿನ ಮಕ್ಕಳಿಗೆ ಮಾತ್ರ ನಿಷೇಧ ಘೋಷಿಸಲಾಗಿದ್ದರೂ, ಇದನ್ನು 16 ವರ್ಷದೊಳಗಿನ ಹದಿಹರೆಯದವರಿಗೂ ವಿಸ್ತರಿಸುವ ಸಾಧ್ಯತೆ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಮುಖ್ಯಮಂತ್ರಿ ನಾಯ್ಡು ಅವರು ಮಾತನಾಡಿ, “ಈ ಪ್ರಸ್ತಾವನೆಯನ್ನು ನಾವು ಸಮಗ್ರವಾಗಿ ಪರಿಶೀಲಿಸುತ್ತಿದ್ದೇವೆ. ತಜ್ಞರು, ಶಿಕ್ಷಣ ತಜ್ಞರು ಹಾಗೂ ಪೋಷಕರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲೂ ಚರ್ಚೆ: ಇದಕ್ಕೂ ಮೊದಲು, ಕರ್ನಾಟಕ ರಾಜ್ಯದಲ್ಲಿ 2026–27ರ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರದ ಈ ಘೋಷಣೆ ದೇಶದಲ್ಲಿ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

ಮಕ್ಕಳ ಭವಿಷ್ಯ ರಕ್ಷಣೆ: ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ವ್ಯಸನ ಅವರ ಶಿಕ್ಷಣ, ನಡವಳಿಕೆ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.

“ಮಕ್ಕಳ ಭವಿಷ್ಯವನ್ನು ಮೊಬೈಲ್ ವ್ಯಸನದಿಂದ ಕಾಪಾಡುವುದು ನಮ್ಮ ಪ್ರಮುಖ ಆದ್ಯತೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುವುದು,” ಎಂದು ಮುಖ್ಯಮಂತ್ರಿ ನಾಯ್ಡು ಸ್ಪಷ್ಟಪಡಿಸಿದ್ದಾರೆ.