Home Advertisement
Home ಸುದ್ದಿ ದೇಶ ಅಮರಾವತಿ ಅಧಿಕೃತ ರಾಜಧಾನಿ : 12 ವರ್ಷದ ಗೊಂದಲಕ್ಕೆ ತೆರೆ

ಅಮರಾವತಿ ಅಧಿಕೃತ ರಾಜಧಾನಿ : 12 ವರ್ಷದ ಗೊಂದಲಕ್ಕೆ ತೆರೆ

0
96

ಅಮರಾವತಿ: ದೀರ್ಘಕಾಲದ ರಾಜಕೀಯ ಗೊಂದಲಕ್ಕೆ ತೆರೆ ಎಳೆದು, ಆಂಧ್ರ ಪ್ರದೇಶ ರಾಜ್ಯದ ಏಕೈಕ ರಾಜಧಾನಿಯಾಗಿ ಅಮರಾವತಿ ಅನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಸುಮಾರು 12 ವರ್ಷಗಳಿಂದ ಮುಂದುವರಿದಿದ್ದ ಅನಿಶ್ಚಿತತೆಗೆ ಇದರಿಂದ ಕೊನೆಗೂ ಅಂತ್ಯ ಕಂಡಿದೆ.

ದ್ರೌಪದಿ ಮುರ್ಮು ಅವರ ಅನುಮೋದನೆಯೊಂದಿಗೆ ಆಂಧ್ರಪ್ರದೇಶ ಪುನರ್ವಿಂಗಡಣೆ (ತಿದ್ದುಪಡಿ) ಕಾಯ್ದೆಗೆ ಮನ್ನಣೆ ದೊರೆತಿದ್ದು, 2026ರ ಏಪ್ರಿಲ್ 6ರಂದು ಭಾರತ ಸರ್ಕಾರ ಅಧಿಕೃತ ಗೆಜೆಟ್ ಪ್ರಕಟಣೆ ಹೊರಡಿಸಿದೆ.

ಹನ್ನೆರಡು ವರ್ಷಗಳ ಗೊಂದಲಕ್ಕೆ ತೆರೆ: 2014ರಲ್ಲಿ ಆಂಧ್ರ ಪ್ರದೇಶ ವಿಭಜನೆಯಾಗಿ ತೆಲಂಗಾಣ ರಾಜ್ಯ ನಿರ್ಮಾಣವಾದ ಬಳಿಕ, ಹೈದರಾಬಾದ್ ನಗರವನ್ನು 10 ವರ್ಷಗಳ ಕಾಲ ಜಂಟಿ ರಾಜಧಾನಿಯಾಗಿ ಘೋಷಿಸಲಾಗಿತ್ತು. 2024ರ ಬಳಿಕ ಹೊಸ ರಾಜಧಾನಿ ಕುರಿತು ಗೊಂದಲ ಮುಂದುವರಿದಿತ್ತು.

ಈಗ ಅಮರಾವತಿಯನ್ನು ಏಕೈಕ ಮತ್ತು ಖಾಯಂ ರಾಜಧಾನಿಯಾಗಿ ಕಾನೂನಾತ್ಮಕ ಮಾನ್ಯತೆ ನೀಡಲಾಗಿದೆ.

ರಾಜಕೀಯ ಪೈಪೋಟಿ ಮತ್ತು ವಿಳಂಬ: ಹಿಂದಿನ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಮೂರು ರಾಜಧಾನಿಗಳ ಪರಿಕಲ್ಪನೆ ಮುಂದಿಟ್ಟಿದ್ದರು ಅಮರಾವತಿ – ಶಾಸಕಾಂಗ, ವಿಶಾಖಪಟ್ಟಣಂ – ಆಡಳಿತ, ಕರ್ನೂಲ್ – ನ್ಯಾಯಾಂಗ, ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರೈತರ ಪ್ರತಿಭಟನೆಗೂ ಕಾರಣವಾಗಿತ್ತು.

ಇದಕ್ಕೆ ವಿರುದ್ಧವಾಗಿ, ಈಗಿನ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅಮರಾವತಿ ಒಂದೇ ರಾಜಧಾನಿಯಾಗಬೇಕು ಎಂಬ ದೃಢ ನಿಲುವು ತೆಗೆದುಕೊಂಡಿದ್ದರು.

ಅಭಿವೃದ್ಧಿಗೆ ಹೊಸ ದಾರಿ : ನಾಯ್ಡು ಸರ್ಕಾರ ಅಮರಾವತಿಯನ್ನು ವಿಶ್ವ ಮಟ್ಟದ ನಗರವಾಗಿ ರೂಪಿಸಲು ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದೆ. 2028ರೊಳಗೆ ವಿಧಾನಸೌಧ ಸೇರಿದಂತೆ ಪ್ರಮುಖ ಆಡಳಿತ ಕಟ್ಟಡಗಳನ್ನು ನಿರ್ಮಿಸುವ ಗುರಿ ಇಡಲಾಗಿದೆ.

ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಹಲವು ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.