Home Advertisement
Home ಸುದ್ದಿ ದೇಶ ಮಹಾರಾಷ್ಟ್ರ ರಾಜಕಾರಣದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ‘ಅಜಿತ್ ಪವಾರ್’

ಮಹಾರಾಷ್ಟ್ರ ರಾಜಕಾರಣದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ‘ಅಜಿತ್ ಪವಾರ್’

0
5

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇಂದು ಬೆಳಿಗ್ಗೆ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಪೈಲಟ್‌ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ನಾಲ್ವರು ಕೂಡ ಸಾವನ್ನಪ್ಪಿದ್ದಾರೆ.

ರಾಜಕೀಯ ತಂತ್ರಗಾರಿಕೆಗೆ ಇನ್ನೊಂದು ಹೆಸರು ‘ಅಜಿತ್ ಪವಾರ್’: ಮಹಾರಾಷ್ಟ್ರ ರಾಜಕೀಯದ ಪ್ರಮುಖ ನಾಯಕನಾಗಿ ಮತ್ತು ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರು ದಶಕಗಳ ಕಾಲ ರಾಜ್ಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ಪಾತ್ರ ವಹಿಸಿಕೊಂಡಿದ್ದರು. 2025ರ ವಿಧಾನಸಭಾ ಚುನಾವಣೆಯಲ್ಲಿ ಅವರು ತಮ್ಮ ಎದುರಾಳಿ ಯುಗೇಂದ್ರ ಪವಾರ್ ಅವರನ್ನು ಸೋಲಿಸಿ ಜಯ ಸಾಧಿಸುವ ಮೂಲಕ ತಮ್ಮ ರಾಜಕೀಯ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.

ಇದನ್ನೂ ಓದಿ:  ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ DCM ಅಜಿತ್ ಪವಾರ್ ನಿಧನ

ಅಜಿತ್ ಪವಾರ್ ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕರು. ಭಾರತೀಯ ರಾಜಕೀಯದ ಚಾಣಕ್ಯ ಎಂದೇ ಗುರುತಿಸಲ್ಪಡುವ ಶರದ್ ಪವಾರ್ ಅವರ ತಮ್ಮನ ಮಗ ಎಂಬ ಹಿನ್ನೆಲೆ ಹೊಂದಿರುವ ಅವರು, ಪಕ್ಷದೊಳಗಿನ ವಿಭಜನೆಯ ನಂತರ ತಮ್ಮದೇ ಆದ ಬಣವನ್ನು ಮುನ್ನಡೆಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನಡೆದ ಪಕ್ಷದ ಒಡಕುಗಳು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಚರ್ಚೆ ಮತ್ತು ಕೋಲಾಹಲಕ್ಕೆ ಕಾರಣವಾಗಿದ್ದವು.

2022ರಲ್ಲಿ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಶಿವಸೇನೆ ಪಕ್ಷ ಎರಡು ಬಣಗಳಾಗಿ ವಿಭಜನೆಯಾದ ಬಳಿಕ, ಶರದ್ ಪವಾರ್ ಸ್ಥಾಪಿಸಿದ ಎನ್‌ಸಿಪಿಯಲ್ಲೂ ಒಡಕು ಉಂಟಾಯಿತು. 1999ರ ಜೂನ್ 10ರಂದು ಶರದ್ ಪವಾರ್ ಅವರು ಎನ್‌ಸಿಪಿಯನ್ನು ಸ್ಥಾಪಿಸಿದ್ದರು. ಪಿ.ಎ. ಸಂಗ್ಮಾ, ತಾರಿಕ್ ಅನ್ವರ್ ಸೇರಿದಂತೆ ಹಲವು ನಾಯಕರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆರಂಭದಲ್ಲಿ ಶರದ್ ಪವಾರ್ ಕುಟುಂಬ ಸಂಪೂರ್ಣವಾಗಿ ಪಕ್ಷದ ಬೆಂಬಲಕ್ಕೆ ನಿಂತಿದ್ದು, ಅಜಿತ್ ಪವಾರ್ ಕೂಡ ತಮ್ಮ ಚಿಕ್ಕಪ್ಪನನ್ನು ಬೆಂಬಲಿಸಿ ಎನ್‌ಸಿಪಿಯಲ್ಲಿ ರಾಜಕೀಯ ಜೀವನ ಆರಂಭಿಸಿದ್ದರು.

ಇದನ್ನೂ ಓದಿ:  ಬಸವರಾಜ ಬೊಮ್ಮಾಯಿ 66ನೇ ಜನ್ಮದಿನ: ತಂದೆ ಸಮಾಧಿಗೆ ನಮನ

ತಮ್ಮ ರಾಜಕೀಯ ಚಾಣಾಕ್ಷತನದ ಮೂಲಕ ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ಪಕ್ಷವನ್ನು ಬಲಪಡಿಸಿದರು. ಆದರೆ ನಂತರದ ಬೆಳವಣಿಗೆಗಳಲ್ಲಿ ಅವರು ತಮ್ಮ ಚಿಕ್ಕಪ್ಪನನ್ನು ಬಿಟ್ಟು, ಎನ್‌ಸಿಪಿಯಿಂದ ಬೇರ್ಪಟ್ಟು ಎನ್‌ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಸೇರಿದರು. ಎಂಟು ಎನ್‌ಸಿಪಿ ಶಾಸಕರೊಂದಿಗೆ ಬಿಜೆಪಿ–ಶಿಂಧೆ ಬಣವನ್ನು ಸೇರಿ ಅವರು ಮತ್ತೊಮ್ಮೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದರು. ಈ ನಿರ್ಧಾರವು ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

ಮಹಾರಾಷ್ಟ್ರ ರಾಜಕಾರಣದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು : ಅಜಿತ್ ಪವಾರ್ ಅವರ ರಾಜಕೀಯ ಜೀವನ 1995ರಲ್ಲಿ ಆರಂಭವಾಯಿತು. ಅವರು ಮೊಟ್ಟಮೊದಲ ಬಾರಿ ಪುಣೆ ಜಿಲ್ಲೆಯ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ನಂತರ 1995, 1999, 2004, 2009, 2014 ಮತ್ತು 2019ರಲ್ಲಿ ನಿರಂತರವಾಗಿ ಇದೇ ಕ್ಷೇತ್ರದಿಂದ ಜಯ ಸಾಧಿಸಿದರು. ವರ್ಷಗಳ ಕಠಿಣ ಪರಿಶ್ರಮದಿಂದ ಅವರು ಮಹಾರಾಷ್ಟ್ರ ರಾಜಕೀಯದಲ್ಲಿ ಬಲವಾದ ನೆಲೆಯನ್ನು ನಿರ್ಮಿಸಿಕೊಂಡರು. 8 ಬಾರಿ ಗೆದ್ದ ಬಾರಾಮತಿಯಲ್ಲೇ ಕೊನೆಯುಸಿರು ಎಳೆದಿದ್ದಾರೆ.

ಸಚಿವರಾಗಿ ಅವರಿಗೆ ದೀರ್ಘ ಅನುಭವ: ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಕೃಷಿ, ಇಂಧನ, ಯೋಜನೆ, ನೀರಾವರಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಸುಧಾಕರ್ ನಾಯಕ್ ಸರ್ಕಾರದಲ್ಲಿ ಕೃಷಿ ಮತ್ತು ವಿದ್ಯುತ್ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ 1992–93ರಲ್ಲಿ ಶರದ್ ಪವಾರ್ ಮುಖ್ಯಮಂತ್ರಿಯಾಗಿದ್ದಾಗ ಅವರು ಸಚಿವರಾಗಿ ಸ್ಥಾನ ಪಡೆದರು. 1999ರಲ್ಲಿ ಕಾಂಗ್ರೆಸ್–ಎನ್‌ಸಿಪಿ ಸರ್ಕಾರ ಅಧಿಕಾರಕ್ಕೆ ಬಂದಾಗ, ವಿಲಾಸ್‌ರಾವ್ ದೇಶಮುಖ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು. 2003–04ರಲ್ಲಿ ಸುಶೀಲ್ ಕುಮಾರ್ ಶಿಂಧೆ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿಯ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿದ್ದರು.

ಐದು ಬಾರಿ ಉಪಮುಖ್ಯಮಂತ್ರಿ : 2019ರಿಂದ ಅಜಿತ್ ಪವಾರ್ ಅವರ ರಾಜಕೀಯ ಜೀವನ ವಿಶೇಷವಾಗಿ ಕುತೂಹಲಕಾರಿಯಾಗಿತ್ತು. ಒಂದೇ ವರ್ಷದಲ್ಲಿ ಇಬ್ಬರು ವಿಭಿನ್ನ ಮುಖ್ಯಮಂತ್ರಿಗಳ ಅಡಿಯಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಪರೂಪದ ದಾಖಲೆಯೂ ಅವರದ್ದಾಗಿದೆ. 2019ರ ನವೆಂಬರ್ 23ರಂದು ದೇವೇಂದ್ರ ಫಡ್ನವೀಸ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಬಹುಮತ ಸಾಬೀತಾಗದ ಕಾರಣ ಸರ್ಕಾರ ಕುಸಿದ ನಂತರ, ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದಾಗ ಮತ್ತೆ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು. 2023ರಲ್ಲಿ ಅವರು ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಒಟ್ಟಾರೆ ಅವರು ಐದು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ದಾಖಲೆ ಹೊಂದಿದ್ದಾರೆ.

ವೈಯಕ್ತಿಕ ಜೀವನದಲ್ಲಿ, ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್, ಅವರು ಮಹಾರಾಷ್ಟ್ರದ ಮಾಜಿ ಸಚಿವ ಪದಮ್ ಸಿಂಗ್ ಪಾಟೀಲ್ ಅವರ ಸಹೋದರಿ. ದಂಪತಿಗೆ ಜೈ ಪವಾರ್ ಮತ್ತು ಪಾರ್ಥ್ ಪವಾರ್ ಎಂಬ ಇಬ್ಬರು ಪುತ್ರರು ಇದ್ದಾರೆ.

ಅಜಿತ್ ಪವಾರ್ ಅವರ ರಾಜಕೀಯ ಪಯಣ, ಪಕ್ಷಾಂತರ, ಅಧಿಕಾರದ ಏರಿಳಿತಗಳು ಹಾಗೂ ಅವರ ಪ್ರಭಾವ ಮಹಾರಾಷ್ಟ್ರ ರಾಜಕೀಯದಲ್ಲಿ ಸದಾ ಚರ್ಚೆಯ ಕೇಂದ್ರಬಿಂದು ಆಗಿಯೇ ಉಳಿದಿದೆ.

Previous articleIADVL ರಾಷ್ಟ್ರೀಯ ಸಮ್ಮೇಳನ “ಡರ್ಮಕಾನ್–2026” ಜ. 29 ರಿಂದ
Next articleಅಜಿತ್ ಪವಾರ್ ನಿಧನಕ್ಕೆ ರಾಜಕೀಯ ಗಣ್ಯರ ತೀವ್ರ ಸಂತಾಪ