ನವದೆಹಲಿ: ಬಿಹಾರದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅನ್ನು 12ನೇ ದಾಖಲೆಯಾಗಿ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಚುನಾವಣಾ ಆಯೋಗಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಆದರೆ ಆಧಾರ್ ಕಾರ್ಡ್‌ನಿಂದ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದಕ್ಕೆ ಮಾತ್ರ ಅನುಕೂಲವಾಗುತ್ತದೆ. ಅದನ್ನು ಭಾರತೀಯ ಪೌರತ್ವದ ಪುರಾವೆಯಾಗಿ ಬಳಸುವಂತಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಅಧಿಕಾರಿಗಳಿಗೆ ಆಧಾರ್ ಪರಿಶೀಲಿಸುವ ಹಕ್ಕಿದೆ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳು ಮತದಾರರ ಪಟ್ಟಿಗೆ ಸೇರ್ಪಡೆ ಅಥವಾ ಹೆಸರು ಅಳಿಸುವ ಉದ್ದೇಶಕ್ಕಾಗಿ ಆಧಾರ್‌ಕಾರ್ಡ್ ಅನ್ನು 12ನೇ ದಾಖಲೆಯಾಗಿ ಪರಿಗಣಿಸಬೇಕು. ಗುರುತಿಗಾಗಿ ಸಲ್ಲಿಸಲಾಗುವ ಎಲ್ಲಾ ದಾಖಲೆಗಳ ನೈಜತೆ ಪರಿಶೀಲಿಸುವ ರೀತಿಯಲ್ಲಿಯೇ ಆಧಾರ್‌ಕಾರ್ಡ್‌ನ ನೈಜತೆಯನ್ನೂ ಖಚಿತಪಡಿಸಿಕೊಳ್ಳುವ ಸ್ವಾತಂತ್ರ್ಯ ಅಧಿಕಾರಿಗಳಿಗಿದೆ ಎಂದೂ ವಿವರಿಸಿದೆ.
1950ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಮತದಾರರ ಗುರುತು ಕಂಡುಹಿಡಿಯಲು ವಿವಿಧ ದಾಖಲೆಗಳನ್ನು ಬಳಸಲು ಅವಕಾಶ ನೀಡಲಾಗಿದೆ. ಇದೇ ಕಾಯ್ದೆಯನುಸಾರ ಆಧಾರ್‌ಕಾರ್ಡ್ ಅನ್ನೂ 12ನೇ ದಾಖಲೆಯಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗವು ಕಾನೂನುಗಳ ಅನುಸಾರ ಆಧಾರ್ ಕಾರ್ಡ್ ಅನ್ನೂ ಗುರುತಿನ ದಾಖಲೆಯಾಗಿ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯಕ್ಕೆ ವಾಗ್ದಾನ ಮಾಡಿದೆ.
ವಾದ-ಪ್ರತಿವಾದವೇನು?: ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗಾಗಿ ಜೂನ್ 24ರಂದು ಚುನಾವಣಾ ಆಯೋಗವು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಹಲವಾರು ಅರ್ಜಿಗಳನ್ನು ಸುಪ್ರೀಂಕೋರ್ಟ್ ಸಲ್ಲಿಸಲಾಗಿದ್ದು ಅವುಗಳ ಬಗ್ಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೊಯ್ಮಲ್ಯ ಬಾಗ್ಚಿ ಅವರ ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ.
ಸಾಕಷ್ಟು ಸುರಕ್ಷತಾ ಕ್ರಮಗಳಿಲ್ಲದೇ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲಾಗುತ್ತಿದೆ. ಈ ಮೂಲಕ ಲಕ್ಷಾಂತರ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಇಂಥ ಕ್ರಮ ಮುಕ್ತ ಹಾಗೂ ನ್ಯಾಯೋಚಿತ ರೀತಿಯಲ್ಲಿ ನಡೆಸಬೇಕಾದ ಚುನಾವಣೆ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿದೆ ಎಂಬುದು ಇಂಡಿಯಾ ಮಿತ್ರಕೂಟದ ಅರ್ಜಿದಾರರ ಆರೋಪ. ಆದರೆ ವಿಧಾನಸಭಾ ಚುನಾವಣೆಗೆ ಮನ್ನ ಮತದಾರರ ಪಟ್ಟಿಗೆ ಅರ್ಹ ಮತದಾರರನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಆಯೋಗ ಪ್ರತಿವಾದ ಮಾಡಿದೆ.
“ಮತದಾರರ ಪಟ್ಟಿಯ ಉದ್ದೇಶಕ್ಕಾಗಿ ಅರ್ಜಿದಾರರು ನಾಗರಿಕರೇ ಎಂದು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಹೀಗಾಗಿ ನ್ಯಾಯಾಲಯ ಈ ವಿಷಯವನ್ನು ಶಾಶ್ವತವಾಗಿ ಬಗೆಹರಿಸಬೇಕು” ಎಂದು ಇಸಿಐ ಅನ್ನು ಪ್ರತಿನಿಧಿಸುವ ಹಿರಿಯ ವಕೀಲ ರಾಕೇಶ್ ದ್ವಿವೇದಿ ಹೇಳಿದ್ದಾರೆ.